ಬೆಂಗಳೂರು: ಹಗಲು ವೇಳೆ ಕೊರೊನಾ ಸೋಂಕು ಹರಡುವುದಿಲ್ಲವೇ? ಹಗಲಿನಲ್ಲಿ ವೇಳೆ ಎಲ್ಲವನ್ನೂ ತೆರೆದು, ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದು ಯಾವ ರೀತಿಯ ಕ್ರಮ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನಗೆ ಇಚ್ಛೆ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಸಚಿವ ಸುಧಾಕರ್ ಆಗಲಿ, ಬೇರೆ ಯಾರೇ ಆಗಲಿ ಯಾರೊಬ್ಬರ ಹೇಳಿಕೆಗೂ ನಾನು ಉತ್ತರ ನೀಡಲ್ಲ. ಕೊರೊನಾ ಸಮಯದಲ್ಲಿ ನಾವು ಸಹಕಾರ ಕೊಟ್ಟಿಲ್ಲ ಅಂತ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಲಿ ನೋಡೋಣ. ಅವರು ಮಾಡುವ ಭ್ರಷ್ಟಾಚಾರಗಳಿಗೆ ನಾವು ಸಹಕಾರ ಕೊಡಬೇಕಾ? ಅದರಲ್ಲಿ ಭಾಗಿಯಾಗಬೇಕಾ? ಇವರು ಪ್ರಚಾರಕ್ಕೋಸ್ಕರ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ನೀವು ಕೊರೊನಾ ನಿಯಂತ್ರಣ ಎಲ್ಲಿ ಮಾಡಿದ್ದೀರಿ? ಸುಮ್ಮನೆ ವಿರೋಧ ಪಕ್ಷಗಳ ಬಗ್ಗೆ ಮಾತನಾಡುವುದಲ್ಲ. ಅಧಿವೇಶನ ಕರೆಯಿರಿ. ಎಲ್ಲರೂ ಚರ್ಚೆ ಮಾಡೋಣ. ಅವರ ಇಷ್ಟಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅವರು ಸರ್ಕಾರವನ್ನು ತಮ್ಮ ಖಾಸಗಿ ಆಸ್ತಿ ಎಂದು ಭಾವಿಸಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ವಿಚಾರವಾಗಿ ಯಾರನ್ನಾದರೂ ಕರೆದು ಮಾತನಾಡಿದ್ದಾರಾ? ಯಾರದಾದರೂ ಸಲಹೆ ಪಡೆದಿದ್ದಾರಾ ಎಂದು ಪ್ರಶ್ನಿಸಿದರು.
PublicNext
24/12/2020 05:24 pm