ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆ ವಿಚಾರವಾಗಿ ರೈತ ಪರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ''ರೈತ ನಾಯಕರು ಎನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿದೆಯೇ? ತಮಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮೂಗು ತೂರಿಸುವುದು ಎಷ್ಟು ಸಮಂಜಸ ಎಂದು ಜನ ಕೇಳುತ್ತಿರುವ ಪ್ರಶ್ನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮೊದಲು ಉತ್ತರ ನೀಡಬೇಕು'' ಎಂದು ಹೇಳಿದ್ದಾರೆ.
''ಸಾರಿಗೆ ವ್ಯವಸ್ಥೆ ಅತ್ಯಂತ ಪ್ರಮುಖ ಮತ್ತು ಅಗತ್ಯ ಸೇವೆಯಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಪದೇ ಪದೇ ಮುಷ್ಕರ, ಬಂದ್‌ಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡಿ ಬಡವರು, ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ'' ಎಂದು ಟ್ವೀಟ್ ಮಾಡಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ನಾಯಕರು ಕಾಂಗ್ರೆಸ್ ಸರ್ಕಾರ ಹಾಗು ಸಮ್ಮಿಶ್ರ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಏಕೆ ಪೂರೈಸಲಿಲ್ಲ? ಸಾರಿಗೆ ನೌಕರರು ಮುಂದಿಟ್ಟಿರುವ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ತಮ್ಮನ್ನು ದಾರಿ ತಪ್ಪಿಸುತ್ತಿರುವವರ ಪ್ರಚೋದನೆಗೆ ಒಳಗಾಗದೆ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
PublicNext
13/12/2020 09:59 pm