ಕೋಲ್ಕತ್ತಾ: ನಿನ್ನೆ ಗುರುವಾರ ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪಶ್ವಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್‍ಖಡ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಕಿ ಜೊತೆ ಆಟ ಆಡಬೇಡಿ ಎಂದು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕಲ್ಲು ತೂರಾಟ ಘಟನೆ ಬಳಿಕ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಪ್ ಧನ್‍ಖಡ್, ರಾಜ್ಯದಲ್ಲಿಯ ಪರಿಸ್ಥಿತಿ ಚೆನ್ನಾಗಿಲ್ಲ. ಸದ್ಯದ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ನನ್ನ ವರದಿಯನ್ನ ಕಳುಹಿಸಿದ್ದೇನೆ. ಮುಖ್ಯಮಂತ್ರಿಗಳು ಬೆಂಕಿ ಜೊತೆ ಆಡದಿರುವುದು ಉತ್ತಮ ಎಂದು ಕಿಡಿ ಕಾರಿದ್ದಾರೆ.
ಯಾರು ಹೊರಗಿನವರು, ಯಾರು ಒಳಗಿನವರು ಎಂಬ ಮೊಂಡು ವಾದದಿಂದ ಮುಖ್ಯಮಂತ್ರಿಗಳು ಹಿಂದೆ ಸರಿಯಬೇಕು. ಸದ್ಯ ನಡೆದಿರುವ ಘಟನೆಗಳು ದುರದೃಷ್ಟಕರ. ಸಿಎಂ ಸಂವಿಧಾನಕ್ಕೆ ಗೌರವ ನೀಡಿ, ಅದರಂತೆ ನಡೆದುಕೊಳ್ಳಬೇಕಿದೆ. ತಮ್ಮ ಜವಾಬ್ದಾರಿಗಳಿಂದ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ನಡೆದ ಅಹಿತಕರ ಘಟನೆ ಬಗ್ಗೆ ರಾಜ್ಯದ ಜನತೆ ಬಳಿ ಸಿಎಂ ಕ್ಷಮೆ ಕೇಳಬೇಕೆಂದು ರಾಜ್ಯಪಾಲರು ಆಗ್ರಹಿಸಿದ್ದಾರೆ.
PublicNext
11/12/2020 05:16 pm