ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನ ವಿವಾದ ತುಸು ತಣ್ಣಗಾಗಿದೆ. ಈಗ ಅವರ ಹುದ್ದೆಯ ನೇಮಕಾತಿಗೆ ಸಂಬಂಧಿಸಿ ಹೈಕೋರ್ಟ್ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.
ಮುಖ್ಯಮಂತ್ರಿಗಳು ಯಾವುದೇ ನೀತಿ ನಿಯಮ ಅನುಸರಿಸದೇ ಸ್ವತಂತ್ರವಾಗಿ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ಅದಕ್ಕೆ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಿದ್ದಾರೆ ಎಂದು ವಕೀಲ ಎಸ್ ಉಮಾಪತಿ ಅವರು ಮನವಿ ಸಲ್ಲಿಸಿದ್ದಾರೆ. ನಿಯಮದ ಪ್ರಕಾರ ಖಾಸಗಿ ವ್ಯಕ್ತಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವಂತಿಲ್ಲ, ಆದರೂ ಸರ್ಕಾರ ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದು ಕಾನೂನು ಬಾಹಿರ ಎಂದು ಅರ್ಜಿದಾರ ಎಸ್ ಉಮಾಪತಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಯಡಿಯೂರಪ್ಪ ಅವರ ಸಂಬಂಧಿಯಾದ ಸಂತೋಷ್ ಅವರನ್ನು ಒಳಗೊಳ್ಳುವ ಏಕೈಕ ಉದ್ದೇಶದಿಂದ ಹುದ್ದೆ ಸೃಷ್ಟಿಸಲಾಗಿದ್ದು ಅದನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. 11ನೇ ಜನವರಿ, 2021ಕ್ಕೆ ಪ್ರಕರಣದ ವಿಚಾರಣೆ ಮುಂದೂಡಲ್ಪಟ್ಟಿದೆ.
PublicNext
02/12/2020 02:07 pm