ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಮಂಜುನಾಥ್ ಅವರ ನಡುವಿನ ವಾಗ್ದಾಳಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಇಂದು ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ.
ರೋಹಿಣಿ ಸಿಂಧೂರಿ ಅವರಿಗೆ ಕೊಬ್ಬು ತಲೆಗೆ ಹತ್ತಿದೆ. ಅದಕ್ಕೆ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಅವರು ಜಿಲ್ಲಾಧಿಕಾರಿ ಸ್ಥಾನಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಬಾರದು ಎಂದು ಶಾಸಕ ಮಂಜುನಾಥ್ ಕಿಡಿಕಾರಿದ್ದಾರೆ.
'ಗಜ ಪಯಣಕ್ಕೆ ಕರೆಯದ ಮೇಲೆ ಗಜ ಸ್ವಾಗತಕ್ಕೆ ಏಕೆ ಜನಪ್ರತಿನಿಧಿಗಳನ್ನು ಕರೆದರು? ಸರಳ ದಸರಾಗೆ ನಾನು ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಆದರೆ ಜಿಲ್ಲಾಧಿಕಾರಿ ರೋಹಿಣಿ ಅವರು ಬಿಜೆಪಿಯವರು ಈ ರೀತಿ ಹೇಳಿ ಮಾಡಿಸುತ್ತಿದ್ದಾರಾ? ಅವರು ಮಂಡ್ಯ, ಹಾಸನದಲ್ಲಿ ಇದ್ದಾಗಲೂ ಇದೇ ಸಮಸ್ಯೆ ಮಾಡಿಕೊಂಡಿದ್ದರು' ಎಂದು ಕುಟುಕಿದರು.
ರಘು ಆಚಾರ್ ಮಾತನಾಡಿ, 'ರೋಹಿಣಿ ಸಿಂಧೂರಿ ಐಎಎಸ್ ಪಾಸ್ ಮಾಡಿದ್ದಾರೋ, ಇಲ್ವೋ? ಪ್ರಭಾವ ಬಳಸಿ ಐಎಎಸ್ ಪಾಸ್ ಮಾಡಿದ್ದಾರಾ? ಇಂತಹದೊಂದು ಅನುಮಾನ ಕಾಡುತ್ತಿದೆ. ಅವರ ನಡೆಯ ಬಗ್ಗೆ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಇನ್ನೆರಡು ದಿನದಲ್ಲಿ ರೋಹಿಣಿ ಸಿಂಧೂರಿ ಕ್ಷಮೆ ಕೇಳಬೇಕು ಅಥವಾ ಆ ಪತ್ರ ಹೇಗೆ ಹೊರಗೆ ಬಂತೆಂದು ಹೇಳಬೇಕು. ಇಲ್ಲದಿದ್ದರೆ ನಾನು ಹಕ್ಕುಚ್ಯುತಿಯನ್ನು ಮಂಡಿಸುತ್ತೇನೆ' ಎಂದು ಎಚ್ಚರಿಕೆ ನೀಡಿದರು.
PublicNext
27/11/2020 04:18 pm