ಗೋಕಾಕ: ಕೇವಲ ಕೆಳ ವರ್ಗದಲ್ಲಷ್ಟೇ ದೇವದಾಸಿ ಪದ್ಧತಿ ಇದೆ. ಶ್ರೀಮಂತರಲ್ಲಿ ಯಾಕೆ ದೇವದಾಸಿ ಪದ್ಧತಿ ಇಲ್ಲ? ಮೂಢನಂಬಿಕೆಗಳನ್ನು ಬಿಟ್ಟಾಗಲೇ ಸಮಾಜ ಸುಧಾರಣೆಯಾಗುತ್ತದೆ. ನಾವು ಇನ್ನೂ ಬೇಡುವ ಸ್ಥಾನದಲ್ಲಿ ಇದ್ದೇವೆ, ನಾವು ದಾನ ಮಾಡುವ ಸ್ಥಾನದಲ್ಲಿ ಇರಬೇಕು ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಗೋಕಾಕ ಮತ್ತು ಮೂಡಲಗಿ ತಾಲೂಕಿನ ಮಾದಿಗ ಸಮಾಜದ ಸೇವಾ ಸಮಿತಿಯಿಂದ ಗೋಕಾಕದ ಅಂಬೇಡ್ಕರ ಭವನದಲ್ಲಿ ಭಾನುವಾರ ಮಾದಿಗ ಸಮಾಜದ ಪ್ರಥಮ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಎಷ್ಟೇ ಶ್ರೀಮಂತರಾದರೂ ಇತಿಹಾಸ ತಿಳಿಯಬೇಕು, ಎಲ್ಲಿಯವರೆಗೂ ಇತಿಹಾಸ ತಿಳಿಯುವುದಿಲ್ಲವೊ ಅಲ್ಲಿಯವರೆಗೂ ನಾವು ಸುಧಾರಣೆ ಆಗಲು ಸಾಧ್ಯವಿಲ್ಲ. ನಾವು ಇವತ್ತು ಯಾರನ್ನು ಪೂಜಿಸಬೇಕೊ ಅವರನ್ನು ಪೂಜಿಸುವುದಿಲ್ಲ. ಅದಕ್ಕಾಗಿ ನಾವು ಇನ್ನು ಬೇಡುವ ಸ್ಥಾನದಲ್ಲಿ ಇದ್ದೇವೆ. ನಾವು ದಾನ ಮಾಡುವ ಸ್ಥಾನದಲ್ಲಿ ಇರಬೇಕು, ದೇವದಾಸಿಯರು ಕೇವಲ ಕೆಳಗಿನ ವರ್ಗದಲ್ಲಿ ಮಾತ್ರ ಯಾಕೆ ಆಗಬೇಕು? ಶ್ರೀಮಂತರಲ್ಲಿ ಯಾಕೆ ದೇವದಾಸಿಯರು ಆಗೋದಿಲ್ಲ? ಶಿಕ್ಷಣ ಪಡೆದರೆ, ಮೂಢ ನಂಬಿಕೆ ತೊರೆದರೆ ಎಲ್ಲವೂ ತಿಳಿಯುತ್ತದೆ ಎಂದರು.
PublicNext
22/11/2020 08:06 pm