ನವದೆಹಲಿ: ದೆಹಲಿಯ ಸಿಂಘೂ ಗಡಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟ ಒಂದು ತಿಂಗಳು ಪೂರೈಸಿ ಮತ್ತಷ್ಟು ಬಲ ಪಡೆದುಕೊಂಡಿದೆ. ಇಂದು ಪ್ರಧಾನಿಗಳು ಆಕಾಶವಾಣಿ ಮೂಲಕ ಮನ್ ಕೀ ಬಾತ್ ಭಾಷಣ ಮಾಡುತ್ತಿದ್ದ ವೇಳೆ ಪ್ರತಿಭಟನಾ ನಿರತ ರೈತರು ತಟ್ಟೆ ಬಾರಿಸುವ ಮೂಲಕ ಥಾಲಿ ಬಜಾವೊ ಹೋರಾಟ ಹಮ್ಮಿಕೊಂಡಿದ್ದರು. ಈ ಮೂಲಕ ಪ್ರಧಾನಿಗಳ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು.
ಪಂಜಾಬ್ ಮತ್ತು ಹರ್ಯಾಣ ಭಾಗದ ಹಲವು ರೈತರು ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ಬೀಡುಬಿಟ್ಟಿದ್ದು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಮತ್ತು ರೈತ ಗುಂಪುಗಳೊಂದಿಗೆ ನಡೆದ ಮಾತುಕತೆ ಇದುವರೆಗೆ ಫಲಪ್ರದವಾಗಿಲ್ಲ. ತಮ್ಮ ಬೇಡಿಕೆಗಳಿಗೆ ಪ್ರಧಾನಿ ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಕಳೆದ ಭಾನುವಾರ, ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಅವರು ಮನ್ ಕಿ ಬಾತ್ ಕಾರ್ಯಕ್ರಮದ ವೇಳೆ ತಾಲಿ ಬಜಾವೊ ಪ್ರತಿಭಟನೆ ನಡೆಸಲು ಕರೆಕೊಟ್ಟರು. ಪ್ರಧಾನಿಯವರು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ ರೈತರು, ನಿಮ್ಮ ಮಾತುಗಳಿಂದ ನಮಗೆ ಬೇಸತ್ತು ಹೋಗಿದೆ,ನಮ್ಮ ಮನದ ಮಾತುಗಳನ್ನು ಯಾವಾಗ ಕೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
PublicNext
27/12/2020 02:35 pm