ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಲಕ್ನೋನ ವಿಶೇಷ ನ್ಯಾಯಾಲಯ ಇಂದು ಹೊರಡಿಸಿರುವ ತೀರ್ಪನ್ನು ಜೈ ಶ್ರೀರಾಮ್ ಎನ್ನುತ್ತಾ ಸ್ವೀಕರಿಸಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಈ ತೀರ್ಪು ರಾಮ ಜನ್ಮಭೂಮಿ ಚಳವಳಿಯ ಬಗ್ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿಯ ನಂಬಿಕೆ, ಬದ್ಧತೆಯನ್ನು ಸಮರ್ಥಿಸುತ್ತದೆ. ನನ್ನ ಪಕ್ಷದ ಕಾರ್ಯಕರ್ತರು, ನಾಯಕರು ಹಾಗೂ ಸಾಧು ಸಂತರು ಮತ್ತು ಅಯೋಧ್ಯೆ ಯಾತ್ರೆ ತಮ್ಮ ನಿಸ್ವಾರ್ಥ ನನಗೆ ಶಕ್ತಿ ನೀಡುತ್ತದೆ ಎಂದು ಸಕ್ರಿಯವಾಗಿ ತೊಡಗಿದ್ದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು.
ಕಾನೂನಾತ್ಮಕ ಹೋರಾಟದಲ್ಲಿ ನನ್ನ ಜೊತೆಗಿದ್ದ ಶ್ರೀ ಮಹಿಪಾಲ್ ಅಹ್ಲುವಾಲಿಯಾ ಹಾಗೂ ಅವರ ತಂಡದವರಿಗೂ ಧನ್ಯವಾದ. ಮಹಿಪಾಲ್, ಅವರ ಮಗ ಹಾಗೂ ಅವರ ತಂಡ ಕಳೆದ ಅನೇಕ ವರ್ಷಗಳಿಂದ ಈ ಪ್ರಕರಣ ಸಂಬಂಧ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ್ದಾರೆ ಎಂದಿದ್ದಾರೆ. ಸದ್ಯ ನನ್ನ ದೇಶದ ಕೋಟಿಗಟ್ಟಲೇ ಜನರೊಂದಿಗೆ ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಭವ್ಯ ರಾಮ ಮಂದಿರದ ಸೌಂದರ್ಯ ಕಣ್ತುಂಬಿಕೊಳ್ಳಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಮಾತನಾಡಿ, ನ್ಯಾಯಾಲಯದಿಂದ ಐತಿಹಾಸಿಕ ನಿರ್ಧಾರ ಪ್ರಕಟವಾಗಿದೆ. ಅಯೋಧ್ಯೆಯಲ್ಲಿ ಡಿಸೆಂಬರ್ 6ರ ಘಟನೆಗೆ ಯಾವುದೇ ಪಿತೂರಿ ನಡೆದಿಲ್ಲ ಎಂಬುದು ಈ ತೀರ್ಪಿನಿಂದ ಸಾಬೀತಾಗಿದೆ. ಅಂದು ನಡೆಸಿದ ಕಾರ್ಯಕ್ರಮ ಪಿತೂರಿಯ ಭಾಗವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
PublicNext
30/09/2020 04:23 pm