ಮುಂಬೈ: ಭೀಕರ ಕಾರು ಅಪಘಾತದಲ್ಲಿ ಬಿಜೆಪಿ ಶಾಸಕರ ಮಗ ಸೇರಿ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ದುರಂತ ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಮಹಾರಾಷ್ಟ್ರದಲ್ಲಿ ನಡೆದಿದೆ.
ಮೃತರಲ್ಲಿ ಬಿಜೆಪಿ ಶಾಸಕ ವಿಜಯ್ ರಹಂಗ್ಡಾಲೆ ಮಗ ಆವಿಷ್ಕಾರ್ ರಹಂಗ್ಡಾಲೆ ಕೂಡ ಒಬ್ಬರು. ಉಳಿದಂತೆ ನೀರಜ್ ಚೌಹಾಣ್, ವಿವೇಕ್ ನಂದನ್, ಪ್ರತ್ಯೂಷ್ ಸಿಂಗ್, ಶುಭಂ ಜೈಸ್ವಾಲ್ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಬಿಜೆಪಿ ಶಾಸಕರ ಮಗ ಆವಿಷ್ಕಾರ್ ರಹಂಗ್ಡಾಲೆ ಮತ್ತು ಪವನ್ ಶಕ್ತಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ನಿತೇಶ್ ಸಿಂಗ್ ಮೆಡಿಕಲ್ ಇಂಟರ್ನಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲ್ಲ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಮಹಾರಾಷ್ಟ್ರದ ಸೆಲ್ಸುರಾ ಬಳಿ ಇರುವ ಸೇತುವೆ ಬಳಿ ಕೆಳಗೆ ಬಿದ್ದ ಪರಿಣಾಮ, ಕಾರಿನಲ್ಲಿದ್ದ 7 ಮಂದಿಯೂ ಅಸುನೀಗಿದ್ದಾರೆ ಎಂದು ವರದಿಯಾಗಿದೆ.
ದುರಂತದಲ್ಲಿ ಸಾವನ್ನಪ್ಪಿದ ಮೃತರೆಲ್ಲರೂ ವಾರ್ಧಾದಲ್ಲಿರುವ ಸಾವಂಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರು ಡಿಯೋಲಿಯಿಂದ ವಾರ್ಧಾ ಕಡೆಗೆ ಪ್ರಯಾಣಿಸುತ್ತಿದ್ದರು. ಈ ಘಟನೆ ಸೋಮವಾರ ತಡರಾತ್ರಿ 11:30ಕ್ಕೆ ಸಂಭವಿಸಿದೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರಶಾಂತ್ ಹೊಲ್ಕರ್ ತಿಳಿಸಿದ್ದಾರೆ.
PublicNext
25/01/2022 12:26 pm