ನವದೆಹಲಿ- ಆ ವೃದ್ಧ ದಂಪತಿ ತಮ್ಮ ಹೊಟ್ಟೆ ಹೊರಲು ರಸ್ತೆ ಬದಿಯಲ್ಲಿ ತಳ್ಳುಗಾಡಿ ಇಟ್ಟು ಢಾಬಾ ನಡೆಸುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಗ್ರಾಹಕರೇ ಇಲ್ಲದ್ದರಿಂದ ನಿರ್ಗತಿಕ ದಂಪತಿ ಕಣ್ಣೀರಿಟ್ಟಿದ್ದರು. ಇವರ ಬದುಕಿನ ಕಥೆಯ ವ್ಯಥೆಯನ್ನು ಯೂಟ್ಯೂಬ್ ಮೂಲಕ ಬಿತ್ತರಿಸಿದ ಗೌರವ್ ವಾಸನ್ ಎಂಬಾತನ ಮೇಲೆ ಈಗ ವಿಶ್ವಾಸ ವಂಚನೆ ಕೇಸ್ ದಾಖಲಾಗಿದೆ. ಈ ಕೇಸ್ ದಾಖಲು ಮಾಡಿದ್ದು ಬೇರಾರೂ ಅಲ್ಲ. ಆ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದ ಬಾಬಾ ಕಾ ಢಾಬಾ ಮಾಲೀಕ ಕಾಂತ ಪ್ರಸಾದ್(80)!
ಇದು ನಿಜಕ್ಕೂ ನಿಜ. ತನ್ನ ದುರಾವಸ್ಥೆ ಬಗ್ಗೆ ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ ಗೌರವ್ ವಾಸನ್ ಎಂಬ ಯೂಟ್ಯೂಬರ್ ವಿರುದ್ಧವೇ ಕಾಂತ ಪ್ರಸಾದ್ ವಿಶ್ವಾಸ ವಂಚನೆಯ ಕೇಸ್ ಹಾಕಿದ್ದಾರೆ. ಕಾರಣ, ವಿಡಿಯೋದಲ್ಲಿ ಆರ್ಥಿಕ ನೆರವು ಕೋರಿದ್ದ ಗೌರವ್ ವಾಸನ್ ಅಲ್ಲಿ ತನ್ನ ಹಾಗೂ ತನ್ನ ಕುಟುಂಬದವರ ಬ್ಯಾಂಕ್ ಖಾತೆಯ ಸಂಖ್ಯೆ ಹಾಕಿದ್ದಾರೆ ಎನ್ನಲಾಗಿದೆ. ಪರಿಣಾಮ ದಾನಿಗಳು ಕಾಂತ ಪ್ರಸಾದ್ ಅವರಿಗೆ ನೀಡಿದ ಸಹಾಯ ಧನ ಯೂಟ್ಯೂಬರ್ ಗೌರವ್ ವಾಸನ್ ಅವರ ಖಾತೆ ಹಾಗೂ ಅವರ ಕುಟುಂಬದವರ ಬ್ಯಾಂಕ್ ಖಾತೆಗೆ ಬಂದು ಜಮೆಯಾಗಿದೆ ಎಂಬ ಆರೋಪ ಅವರ ಮೇಲಿದೆ.
ಹೀಗಾಗಿ ಅವರು ನಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂತ ಪ್ರಸಾದ್ ಅವರು ದೆಹಲಿಯ ಮಾಳವೀಯ ನಗರದ ಪೊಲೀಸ್ ಠಾಣೆಯಲ್ಲಿ ಗೌರವ್ ವಾಸನ್ ವಿರುದ್ಧ ವಿಶ್ವಾಸ ವಂಚನೆಯ ಕೇಸ್ ಹಾಕಿದ್ದಾರೆ.
PublicNext
02/11/2020 12:46 pm