ಮುಂಬೈ: ಹಬ್ಬಕ್ಕೆಂದು ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಮಹಿಳೆಯೊಬ್ಬರು ಕಸದ ಜೊತೆಗೆ ಸುಮಾರು 3 ಕೋಟಿ ರೂ. ಬೆಲೆಯ ಚಿನ್ನಾಭರಣವನ್ನೂ ಬಿಸಾಕಿಬಿಟ್ಟಿದ್ದಾರೆ. ಇಂತದ್ದೊಂದು ಅಚ್ಚರಿಯ ಘಟನೆ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ನಡೆದಿದೆ.
ದೀಪಾವಳಿ ಅಂಗವಾಗಿ ಮಹಿಳೆ ರೇಖಾ ಸುಲೇಕರ್ ಮನೆಯನ್ನು ಸ್ವಚ್ಛಗೊಳಿಸಿದ್ದರು. ಈ ವೇಳೆ ಸುಮಾರು 3 ಕೋಟಿ ರೂ.ಬೆಲೆ ಬಾಳುವ ಚಿನ್ನಾಭರಣ ಇರುವ ಬ್ಯಾಗನ್ನು ಸಹ ಕಸ ಇಡುವ ಜಾಗದಲ್ಲಿಇಟ್ಟಿದ್ದಾರೆ. ಬಳಿಕ ಅದನ್ನು ಕಸ ಸಂಗ್ರಹಿಸುವ ವಾಹನಕ್ಕೆ ನೀಡಿದ್ದಾರೆ. ಆ ನಂತರ ರೇಖಾ ಅವರಿಗೆ ಕಸದ ಜೊತೆಗೆ ಬೆಲೆ ಬಾಳುವ ಒಡವೆ ತುಂಬಿದ್ದ ಚೀಲವನ್ನೂ ಹಾಕಿರುವುದು ಅರಿವಾಗಿದೆ.
ಕಸದೊಂದಿಗೆ ಚಿನ್ನಾಭರಣಗಳನ್ನೂ ಹಾಕಿದ್ದು ಅರಿವಿಗೆ ಬರುತ್ತಿದ್ದಂತೆ ಕುಟುಂಬದವರು ಕೂಡಲೇ ಪಿಂಪ್ರಿ-ಚಿಂಚವಾಡ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಇದಕ್ಕೆ ತತ್ಕ್ಷಣ ಸ್ಪಂದಿಸಿದ ಅಧಿಕಾರಿಗಳು, ವಾಹನ ಕಸದ ಡಂಪಿಂಗ್ ಯಾರ್ಡ್‍ಗೆ ತೆರಳಿದೆ. ನೀವೂ ಅಲ್ಲಿಗೆ ಹೋಗಿ ಎಂದು ಸೂಚಿಸಿದ್ದಾರೆ. ಬಳಿಕ ಕುಟುಂಬಸ್ಥರು ಧಿಡೀರನೇ ಅಲ್ಲಿಗೆ ಧಾವಿಸಿದ್ದಾರೆ. ಅಲ್ಲದೆ ಪಿಸಿಎಂಸಿ ಉದ್ಯೋಗಿಗಳು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ್ದಾರೆ. ಅಂತಿಮವಾಗಿ ಬೆಲೆಬಾಳುವ ಒಡವೆಗಳು ತುಂಬಿದ್ದ ಬ್ಯಾಗ್‍ಅನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಬ್ಯಾಗ್‍ಅನ್ನು ಸುರಕ್ಷಿತವಾಗಿ ಮಾಲೀಕರಿಗೆ ತಲುಪಿಸಿದ್ದಾರೆ. ಅಚಾತುರ್ಯದಿಂದ ಮಾಡಿದ ತಪ್ಪಿಗೆ ರೇಖಾ ಸುಲೇಕರ್ ಪಾಠ ಕಲಿತಿದ್ದಾರೆ.
PublicNext
15/11/2020 11:38 am