ನವದೆಹಲಿ: ಅಕ್ಟೋಬರ್ ತಿಂಗಳು ಬಂತೆಂದರೆ ಸಾಲು ಸಾಲು ಹಬ್ಬಗಳು. ಆದರೆ ಈ ವರ್ಷ ಅಕ್ಟೋಬರ್‌ನಲ್ಲಿ ಮತ್ತೊಂದು ಖಗೋಳ ವಿಸ್ಮಯ ನಡೆಯಲಿದೆ. ನೀಲಿಯಾಕಾಶದಲ್ಲಿ ಇಂದು ಅಪರೂಪದಲ್ಲಿ ಅಪರೂಪವಾದ 'ಬ್ಲೂ ಮೂನ್' ಕಾಣಿಸಲಿದೆ. ಬ್ಲೂಮೂನ್‍ನ ಕಣ್ತುಂಬಿಕೊಳ್ಳುವ ತವಕ ಜನರಲ್ಲಿ ಮನೆ ಮಾಡಿದೆ.
ಬ್ಲೂ ಮೂನ್ ಎಂದರೆ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದರ್ಥವಲ್ಲ. ಒಂದೇ ತಿಂಗಳ ಎರಡು ಹುಣ್ಣಿಮೆಗಳು ಬರುವ ಪ್ರಾಕೃತಿಕ ವಿದ್ಯಮಾನವನ್ನೇ ಬ್ಲೂ ಮೂನ್ (ನೀಲಿ ಚಂದ್ರ) ಎಂದು ಕರೆಯುತ್ತಾರೆ. ಪ್ರತಿ 2 ಅಥವಾ 3 ವರ್ಷಗಳಿಗೊಮ್ಮೆ ಒಂದೇ ತಿಂಗಳಲ್ಲಿ 2 ಬಾರಿ ಹುಣ್ಣಿಮೆ ಸಂಭವಿಸುತ್ತದೆ. ಹೀಗೆ ಒಂದೇ ತಿಂಗಳಲ್ಲಿ 2 ಬಾರಿ ಹುಣ್ಣಿಮೆ ಸಂಭವಿಸುವ ವಿದ್ಯಮಾನವನ್ನು ಬ್ಲೂ ಮೂನ್ ಎಂದು ಕರೆಯುವುದು ವಾಡಿಕೆ. ಒಂದೇ ತಿಂಗಳಲ್ಲಿ ಎರಡು ಬಾರಿ ಸಂಭವಿಸುತ್ತಿದೆ ಎಂಬ ವಿಶೇಷತೆ ಬಿಟ್ಟರೆ, ಈ ಹುಣ್ಣಿಮೆ ಕೂಡ ಎಲ್ಲ ಹುಣ್ಣಿಮೆಗಳಂತೆ ಸಾಮಾನ್ಯ ಪ್ರಾಕೃತಿಕ ವಿದ್ಯಮಾನವಾಗಿದೆ.
ಖಗೋಳ ಶಾಸ್ತ್ರದ ಹಾಗೂ ಗ್ರಗೋರಿಯನ್ ಕ್ಯಾಲೆಂಡರ್ ಪ್ರಕಾರ ಪ್ರಕಾರ 29.531 ದಿನ ಅಥವಾ 29 ದಿನ, 12 ಗಂಟೆ 44 ನಿಮಿಷ, 38 ಸೆಕೆಂಡ್‌ಗಳಿಗೆ ಒಂದು ಚಾಂದ್ರಮಾನ ತಿಂಗಳು ಎಂದು ಪರಿಗಣಿಸಲಾಗಿದೆ. ಹೀಗಾಗಿ 2ರಿಂದ ಮೂರು ವರ್ಷಗಳಿಗೆ ಒಮ್ಮೆ 31 ದಿನ ಇರುವ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುತ್ತದೆ. ಸಾಮಾನ್ಯವಾಗಿ ಎರಡು-ಮೂರು ವರ್ಷಕ್ಕೊಮ್ಮೆ ಈ ವಿದ್ಯಮಾನ ಘಟಿಸುತ್ತದೆ.
2018ರಲ್ಲಿ ಬ್ಲೂಮೂನ್ ಸಂಭವಿಸಿತ್ತು. ಮುಂದಿನ ಬ್ಲೂಮೂನ್ 2023ರ ಆಗಸ್ಟ್ 31 ಸಂಭವಿಸಲಿದೆ. 1 ಅಥವಾ 2ನೇ ತಾರೀಖಿನಂದು ಹುಣ್ಣಿಮೆ ಸಂಭವಿಸಿದರೆ ಆ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಸಂಭವಿಸುತ್ತವೆ.
PublicNext
31/10/2020 08:05 am