ಚಿತ್ರದುರ್ಗ: ದೇವರ ಹರಕೆ ಎಂಬ ನಂಬಿಕೆಯಿಂದ 20 ಅಡಿ ಜಡೆ ಬಿಟ್ಟಿದ್ದ ಶತಾಯುಷಿ ಪಾಲಯ್ಯ (103) ಶುಕ್ರವಾರ ವಿಧಿವಶರಾಗಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಹಳ್ಳಿಯವರಾದ ಪಾಲಯ್ಯ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಪಾಲಯ್ಯ ಹುಟ್ಟಿದಾಗಿನಿಂದಲೂ ತಮ್ಮ ತಲೆ ಕೂದಲನ್ನು ಕತ್ತರಿಸಿರಲಿಲ್ಲ. ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಗೆ ಭಕ್ತರು ಸಮರ್ಪಿಸುತ್ತಿದ್ದ ಗೋವು, ಕರು ಹಾಗೂ ಎತ್ತುಗಳನ್ನು ಕಾಯುತ್ತಿದ್ದರು. ಕೊನೆವರೆಗೂ ಪಾಲಯ್ಯ ಗೋವು ಪಾಲಕರಾಗಿಯೇ ಜೀವನ ಸಾಗಿಸುತ್ತಾ ಕೊನೆಯುಸಿರೆಳೆದಿದ್ದಾರೆ.
ಜೀವನ ಪೂರ್ತಿ ಐದಾರು ಕೆ.ಜಿ. ತೂಕದ ಭಾರದ ಕೂದಲನ್ನು ಹೊತ್ತು ಬದುಕುತ್ತಿದ್ದರು. ತಮ್ಮ ಉದ್ದವಾದ ಜನಡೆಯಿಂದಲೇ ಅವರು 'ಜಡೆ ಪಾಲಯ್ಯ' ಎಂದು ಪ್ರಸಿದ್ಧಿ ಪಡೆದಿದ್ದರು. ಅಂತ್ಯಕ್ರಿಯೆ ವೇಳೆ 20 ಅಡಿಯ ಜಡೆಯನ್ನು ಸಮಾಧಿಯಲ್ಲಿ ಹಾಸಿ ಅದರ ಮೇಲೆ ಮೃತದೇಹ ಮಲಗಿಸಿ ಅಂತ್ಯಕ್ರಿಯೆ ನಡೆಸಲಾಯಿತು.
PublicNext
17/10/2020 02:00 pm