ಹಸಿರು ಬಂಗಾರ ಎಂದು ಕರೆಯಲ್ಪಡುವ ಬಿದಿರಿನ ಬಗ್ಗೆ ಜಾಗೃತಿ ಮೂಡಿಸಲು, ಬಿದಿರು ಉದ್ಯಮವನ್ನು ಉತ್ತೇಜಿಸಲು ಪ್ರತಿ ವರ್ಷ ಸೆ.18 ರಂದು ವಿಶ್ವ ಬಿದಿರು ದಿನ ಎಂದು ಆಚರಿಸಲಾಗುತ್ತದೆ. ಹೌದು 2009ರಲ್ಲಿ ಜಾಗತಿಕ ಬಿದಿರು ಸಂಸ್ಥೆ ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಹಮ್ಮಿಕೊಂಡಿದ್ದ 8 ನೇ ಜಾಗತಿಕ ಬಿದಿರು ಅಧಿವೇಶನದಲ್ಲಿ ಪ್ರತಿ ವರ್ಷ ಸೆ.18ರಂದು ವಿಶ್ವ ಬಿದಿರು ದಿನ ಆಚರಿಸಲು ನಿರ್ಧರಿಸಲಾಯಿತು. ಆ ಮೂಲಕ ಬಿದಿರು ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ವರ್ಷದ ಆಚರಣೆಗೆ ‘ಹಸಿರು ಜೀವನ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಬಿದಿರು’ ಎಂಬ ಧ್ಯೇಯವಾಕ್ಯವಿದೆ.
ಇನ್ನು ಬಿದಿರು ಈಗ ಕೇವಲ ಅರಣ್ಯ ಬೆಳೆಯಾಗಿ ಉಳಿದಿಲ್ಲ; ಬಹೂಪಯೋಗಿಯಾಗಿದೆ. ಬಿದಿರು ಬುಟ್ಟಿಗೆ ಮಾತ್ರ ಸೀಮಿತವಾಗಿದ್ದ ಬಿದಿರು ಭವಿಷ್ಯದಲ್ಲಿ ಆಹಾರ, ಟಿಂಬರ್, ಇಂಧನ ಹೀಗೆ ಎಲ್ಲವೂ ಆಗಿ ಬದಲಾಗುತ್ತಿದೆ. ಆದ್ದರಿಂದಲೇ ಇದನ್ನು ಹಸಿರು ಬಂಗಾರ (ಗ್ರೀನ್ ಗೋಲ್ಡ್) ಎಂದು ಕರೆಯಲಾಗುತ್ತದೆ. ಸವಳು-ಜವಳು ಇರುವ ಭೂಮಿಯಲ್ಲಿ ಬಿದಿರು ಬೆಳೆದರೆ ಲವಣಯುಕ್ತ ಮಣ್ಣನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸಲು ಸಹಕಾರಿಯಾಗುತ್ತದೆ. ಬಿದಿರಿನ ಎಲೆಗಳು ಭೂಮಿಯ ಸಾರವನ್ನು ಹೆಚ್ಚಿಸುತ್ತದೆ.
ಬಿದಿರು ಸಾಮಾನ್ಯವಾಗಿ ಮೂರು ವರ್ಷಕ್ಕೆ ಫಲ ನೀಡುತ್ತದೆ. ಇದಕ್ಕೆ ಆರೈಕೆ ಬೇಡ ಅದು ತಾನಾಗಿಯೇ ಬೆಳೆಯುತ್ತದೆ. ಹಾಗಾಗಿ ಬಿದಿರಿನ ಸುಸ್ಥಿರ ಬಳಕೆಯನ್ನು ಉತ್ತೇಜಿಸುವುದೇ ಈ ದಿನಾಚರಣೆಯ ಉದ್ದೇಶ. ಬಿದಿರು ಕೃಷಿಯಲ್ಲಿ ಚೀನಾ ಬಳಿಕ ಇಡೀ ವಿಶ್ವದಲ್ಲಿ ಭಾರತ 2ನೇ ಸ್ಥಾನದಲ್ಲಿದೆ.
PublicNext
18/09/2022 08:04 am