ಬೆಳಗಾವಿ: ನಗರದ ಜಾಧವ್ ಓಣಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೌದು... ಬೆಳಗಾವಿಯ ಜಾಧವ್ ನಗರದಲ್ಲಿ ಇದ್ದಕ್ಕಿದ್ದಂತೆ ಚಿರತೆ ಪ್ರತ್ಯಕ್ಷವಾಗಿದೆ! ಕುಟ್ರೆ ಬಿಲ್ಡಿಂಗ್ ಮುಂದೆ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನ ಮೇಲೆರಗಿದೆ. ಚಿರತೆ ನೋಡಿ ಇತರ ಕಟ್ಟಡ ಕಾರ್ಮಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಷ್ಟರಲ್ಲಿಯೇ ಚಿರತೆ ಖನಗಾಂವ್ ಮೂಲದ ಕಟ್ಟಡ ಕಾರ್ಮಿಕ ಸಿದ್ದರಾಯಿ ಲಕ್ಷ್ಮಣ್ ನಿಲಜ್‍ಕರ್(38) ಮೇಲೆ ದಾಳಿ ಮಾಡಿದ್ದು ಬೆನ್ನ ಮೇಲೆ ಪರಚಿದ ಗಾಯವಾಗಿದೆ. ಅದೃಷ್ಟವಶಾತ್ ಈ ಚಿರತೆ, ಜನರನ್ನು ಕಂಡು ಗಾಬರಿಯಾಗಿ ಓಡಿದ್ದರಿಂದ ಕಾರ್ಮಿಕನ ಜೀವ ಉಳಿದಿದೆ.
ಮಾಹಿತಿ ತಿಳಿದಾಕ್ಷಣ ಎಸ್‍ಡಿಆರ್‍ಎಫ್, ಅರಣ್ಯ ಇಲಾಖೆ ಸಿಬ್ಬಂದಿ, ಎಪಿಎಂಸಿ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಹಿರೇಮಠ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಸುತ್ತಮುತ್ತಲಿನ ಮನೆಗಳ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದಾಗ "ಚಿರತೆ ಹಾರಾಟ"ದ ಚಿತ್ರಣ ಸೆರೆಯಾಗಿವೆ.
ಈ ಸಂದರ್ಭ ಚಿರತೆ ದಾಳಿಗೆ ಒಳಗಾದ ಕಾರ್ಮಿಕ ಸಿದ್ರಾಯಿ ಮಾತನಾಡಿ, ಕೆಲಸ ಮಾಡುತ್ತಿದ್ದ ವೇಳೆ ಚಿರತೆ ಹಿಂದಿನಿಂದ ಬಂದು ನನ್ನ ಮೇಲೆರಗಿದೆ. ಆಗ ನಾನು ಕೆಳಗೆ ಬಿದ್ದೆ. ಜತೆಯಲ್ಲಿದ್ದ ಕಾರ್ಮಿಕರು ಚಿರತೆಯನ್ನು ನೋಡಿ, ಬೊಬ್ಬೆ ಹಾಕಿದ್ದಾರೆ. ನನ್ನ ಬೆನ್ನ ಮೇಲೆ ಚಿರತೆ ಪರಚಿದ ಗಾಯವಾಗಿದೆ ಎಂದು ಘಟನೆ ಬಗ್ಗೆ ವಿವರಿಸಿದರು. ಇನ್ನು, ಚಿರತೆಯನ್ನು ಪ್ರತ್ಯಕ್ಷವಾಗಿ ಕಂಡ ಸ್ಥಳೀಯರು ಭಯಗೊಂಡಿದ್ದು, "ಚಿರತೆ ನೋಡೋಕೆ ದೊಡ್ಡದಾಗಿತ್ತು. ಭಯಾನಕವಾಗಿ ಅರಚುತ್ತಾ ಓಡಿ ಹೋಯಿತು" ಎಂದರು.
PublicNext
05/08/2022 07:17 pm