ವರದಿ- ಗಣೇಶ್ ಹೆಗಡೆ
ಬೆಂಗಳೂರು: ಅಸಾನಿ ಚಂಡಮಾರುತದ ಪರಿಣಾಮ ಬೆಂಗಳೂರು ನಗರದಲ್ಲಿ ಬೇಸಿಗೆ ಸಮಯದಲ್ಲಿ ಮೈ ಕೊರೆಯುವ ಚಳಿಯ ಅನುಭವ ಉಂಟಾಗುತ್ತಿದೆ. ಇದಕ್ಕೆ ಕಾರಣ ಗರಿಷ್ಠ ಉಷ್ಣಾಂಶ ಅತ್ಯಂತ ಕಡಿಮೆ ದಾಖಲಾಗಿರುವುದು. ನಿನ್ನೆ ನಗರದಲ್ಲಿ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಾತಾವರಣದಲ್ಲಿ 50 ವರ್ಷಗಳ ದಾಖಲೆಯ ಅತ್ಯಂತ ಕಡಿಮೆ ಉಷ್ಣಾಂಶ ಇದಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ.
1972ರ ನಂತರ ಇದೇ ಮೊದಲು ಇಷ್ಟು ಪ್ರಮಾಣದ ಚಳಿ ವಾತಾವರಣ ಇದ್ದು, ಇದು ಸಾಮಾನ್ಯಕ್ಕಿಂತ 10 ಡಿಗ್ರಿ ಕಡಿಮೆ ಉಷ್ಣಾಂಶ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ:
ಇಂದು ಮತ್ತು ನಾಳೆಯೂ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆ ಹಾಗೂ ಗುಡುಗು ಸಹಿತ ಮಳೆಯಾಗಲಿದೆ ಎಂದಿದ್ದಾರೆ.
ಈ ಬಾರಿ ಬೇಗ ಮುಂಗಾರು ಪ್ರವೇಶ:
ಮುಂಗಾರು ಮಾರುತವು ದಕ್ಷಿಣ ಅಂಡಮಾನ್ ಸಮುದ್ರ ಹಾಗೂ ಆಗ್ನೇಯ ಬಂಗಾಳಕೊಲ್ಲಿಯತ್ತ ಮೇ 15ನೇ ತಾರೀಕಿನ ವೇಳೆಗೆ ಪ್ರವೇಶಿಸುವ ಸಾಧ್ಯತೆ ಎಂದು ವರದಿ ತಿಳಿಸಿದ್ದು, ಆ ಪ್ರಕಾರ ದೇಶಕ್ಕೆ ಮುಂಗಾರು ಈ ವರ್ಷ ನಾಲ್ಕೈದು ದಿನ ಬೇಗ ಪ್ರವೇಶಿಸುವ ಸಾಧ್ಯತೆ ಇದ್ದು, ಮೇ 25 ರ ನಂತರದಲ್ಲೇ ಮಳೆಗಾಲ ಆರಂಭವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
PublicNext
13/05/2022 05:16 pm