ಬೆಂಗಳೂರು : ಬೆಳಕಿನಲ್ಲಿ ನಮ್ಮ ನೆರಳು ನಮಗೆ ಕಾಣುವುದು ಸಾಮಾನ್ಯ ಆದ್ರೆ ನಾಳೆ ಏ.24 ಭಾನುವಾರ ಸೂರ್ಯ ಬೆಳಿಗ್ಗೆ 11.30 ರಿಂದ 1 ಗಂಟೆಯ ಅವಧಿಯಲ್ಲಿ ನಮ್ಮ ನಡು ನೆತ್ತಿಯ ಮೇಲೆ ಬರಲಿರುವ ಸೂರ್ಯ ನಮ್ಮ ನೆರಳನ್ನೇ ಮಾಯ ಮಾಡಲಿದ್ದಾನೆ. ಇದರಿಂದ ಎಷ್ಟೇ ಪ್ರಖರ ಬಿಸಿಲಿದ್ದರೂ ನಮ್ಮ ನೆರಳೇ ಮೂಡದಿರುವ ಪ್ರಕೃತಿಯ ವಿಸ್ಮಯ ಬೆಂಗಳೂರಿನಲ್ಲಿ ಜರುಗಲಿದೆ.
ಸಾಮಾನ್ಯವಾಗಿ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಘಟಿಸುವ ಈ ವಿದ್ಯಮಾನವನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ. ಶೂನ್ಯ ನೆರಳಿನ ದಿನದಂದು ಸೂರ್ಯ ನಮ್ಮ ನಡು ನೆತ್ತಿಯ ಮೇಲೆ ಬರುವುದರಿಂದ ನೆರಳು ರೂಪುಗೊಳ್ಳುವುದಿಲ್ಲ.
ವೈಜ್ಞಾನಿಕವಾಗಿ ಹೇಳುವುದಾದರೆ ಅನ್ಯ ದಿನಗಳಲ್ಲಿ ಸೂರ್ಯ ನಮ್ಮ ನೆತ್ತಿಯ ಮೇಲೆ ಇದ್ದಂತೆ ಭಾಸವಾಗುತ್ತಿದ್ದರೂ ವಾಸ್ತವದಲ್ಲಿ ತುಸು ಅತ್ತಿತ್ತ ಇರುತ್ತಾನೆ. ಆದರೆ ಶೂನ್ಯ ನೆರಳಿನ ದಿನದಂದು ಸೂರ್ಯ ಖಗೋಳ ಶಾಸ್ತ್ರದ ಪ್ರಕಾರ ಝೆನಿತ್ ಅಥವಾ ತುತ್ತತುದಿ ಎಂಬ ಕಾಲ್ಪನಿಕ ಬಿಂದುವಿನ ಮೇಲಿರುತ್ತಾನೆ. ಸೂರ್ಯ ಈ ಕಾಲ್ಪನಿಕ ಬಿಂದುವಿನ ಮೇಲೆ ಹಾದು ಹೋಗುವಾಗ ಆ ನಿರ್ದಿಷ್ಟ ಸ್ಥಳದಲ್ಲಿ ನೆರಳು ಮರೆಯಾಗುತ್ತದೆ.
ಈ ವಿಸ್ಮಯ ಕಾಣಲು ನೀವು ನಿಮ್ಮ ಮನೆಯ ಟೆರೇಸ್ ಮೇಲೆ ನಿಂತು ಪರೀಕ್ಷಿಸಿಕೊಳ್ಳಬಹುದು.
PublicNext
23/04/2022 12:17 pm