ಮಡಿಕೇರಿ: ಕೊಡಗು ಜಿಲ್ಲೆಯ ಮದೆನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋಮ್ಮೇಗೌಡನ ಭವಾನಿಶಂಕರ್ ಎಂಬುವವರ ಮನೆಯಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಪಿಯೂಷ್ ಪೆರೇರ ಸೆರೆ ಹಿಡಿದು ರಕ್ಷಿಸಿದ್ದಾರೆ.
ಕಾಫಿ ತುಂಬಿದ ಚೀಲಗಳ ಮಧ್ಯೆ ಸೇರಿಕೊಂಡಿದ್ದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಪಿಯೂಷ್ ಪೆರೇರ ಅವರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಇದೇ ವೇಳೆ ಕಾಳಿಂಗ ಸರ್ಪದ ಅಪಾಯಕಾರಿ ದಾಳಿಯಿಂದಲೂ ತಪ್ಪಿಸಿಕೊಳ್ಳಬೇಕಾದ ಸನ್ನಿವೇಶ ಅವರಿಗೆ ಎದುರಾಯಿತು. ಕೊನೆಗೂ ಯಶಸ್ವಿಯಾಗಿ ಸೆರೆಯಾದ ಕಾಳಿಂಗನನ್ನು ಸಂಪಾಜೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟ ಪೆರೇರ ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲಿಯವರೆಗೆ ನೂರಾರು ಹಾವುಗಳನ್ನು ರಕ್ಷಿಸಿರುವ ಪಿಯೂಷ್ ಪೆರೇರ ಅವರು ಸೆರೆ ಹಿಡಿದಿರುವ ನಾಲ್ಕನೇ ಕಾಳಿಂಗ ಸರ್ಪ ಇದಾಗಿದೆ. ಹಾವುಗಳ ನಾಶದಿಂದ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಹಾವುಗಳನ್ನು ಕೊಲ್ಲದೇ ಅವುಗಳನ್ನು ರಕ್ಷಿಸಬೇಕೆಂದು ಪಿಯೂಷ್ ಮನವಿ ಮಾಡಿದ್ದಾರೆ.
PublicNext
10/03/2022 11:00 pm