ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳಿಗಾಲದ ಚಂದವನ್ನು ಹೆಚ್ಚಿಸಿದ ಮಾಗಡಿ ಕೆರೆ: ಹಕ್ಕಿಗಳ ಕಲರವ...!

ಗದಗ: ಚಳಿಗಾಲ ಆರಂಭವಾದರೆ ಸಾಕು ಸಾವಿರಾರು ಕಿಲೋಮೀಟರ್ ದೂರದಿಂದ ವಿದೇಶಿ ಹಕ್ಕಿಗಳು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆ ಆಗಮಿಸುತ್ತವೆ. ವಿದೇಶಿ ಪಕ್ಷಿಗಳ ಆಗಮನದಿಂದ ಗದಗ ಜಿಲ್ಲೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ದೇಶ- ವಿದೇಶಿಗಳ ಹಕ್ಕಿಗಳು ಪ್ರತಿವರ್ಷ ಚಳಿಗಾಲದ ಸಮಯದಲ್ಲಿ ಲಗ್ಗೆ ಇಡುತ್ತವೆ.

ಹೌದು..ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ, ಪಾಕಿಸ್ತಾನದ ಲಡಾಖ್ ಹೀಗೆ ಅನೇಕ ದೇಶದ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಆ ದೇಶದ ಹವಾಮಾನವೇ ಈ ಪಕ್ಷಿಗಳು ಇಲ್ಲಿಗೆ ಬರಲು ಕಾರಣವಾಗಿದೆ. ಈ ಬಾನಾಡಿಗಳ ಮನಮೋಹಕ ದೃಶ್ಯಗಳು ಕಂಡು ಬರುವುದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ. ನೇಸರನ ಆಗಮನದ ಬೆನ್ನಲ್ಲೇ ವಿಶಾಲ ಕೆರೆಯ ಸುತ್ತ ಮುತ್ತ ವಿದೇಶಿ ಹಕ್ಕಿಗಳ ಕಲರವ ಸಂಭ್ರಮ ಹೇಳತೀರದು. ಬೆಳಿಗ್ಗೆಯಿಂದ ಸಂಜೆಯವರೆಗೂ ಈ ವಲಸೆ ಪಕ್ಷಿಗಳ ಸಾಮ್ರಾಜ್ಯ ನೋಡುಗರಿಗೆ ಬೆರಗು ಮೂಡಿಸುತ್ತಿದೆ.

ಈ ಕೆರೆ ಬರೀ ನೀರು ತುಂಬಿಕೊಂಡಿಲ್ಲ. ಬದಲಾಗಿ ಆಕಾಶದತ್ತರಕ್ಕೆ ಹಾರೋ ಬಾನಾಡಿಗಳ ಲೋಕವನ್ನೇ ತನ್ನ ಮಡಿಲಿಗೆ ಹಾಕಿಕೊಂಡಿದೆ. ಸಹಸ್ರಾರು ವಲಸೆ ಪಕ್ಷಿಗಳಿಗೆ ತೂಗೋ ತೊಟ್ಟಿಲಾಗುವ ಮೂಲಕ ಆಶ್ರಯ ತಾಣವಾಗಿದೆ. ಅಂತಹ ಸೌಂದರ್ಯದ ತಾಣವನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು.

ಗದಗದಿಂದ ಬೆಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಲಕ್ಷ್ಮೇಶ್ವರದಿಂದ 12 ಕಿಲೋ ಮೀಟರ್ ಅಂತರದಲ್ಲಿ 138 ಎಕರೆ ವಿಸ್ತೀರ್ಣದ ಈ ಕೆರೆಯಲ್ಲಿ ಕಳೆದ 15 ವರ್ಷಗಳಿಂದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಲಡಾಖ್, ಟಿಬೆಟ್ ಗಳಿಂದ ಸಹಸ್ರಾರು ಪಕ್ಷಿಗಳು ಬರುತ್ತಿವೆ. ಇವುಗಳ ಕಲರವ ಪ್ರತಿವರ್ಷ ಕೆರೆಗೆ ರಂಗು ತರುತ್ತಿದೆ. ಜೊತೆಗೆ ಈ ಪಕ್ಷಿಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ.

ಕೆರೆಯಲ್ಲಿ ಈಜಾಡುತ್ತಿರುವ ಬಾನಾಡಿಗಳು ಬಾತು ಕೋಳಿಗಿಂತ ದೊಡ್ಡ ಗಾತ್ರದಲ್ಲಿರೋ ಹಂಸಗಳ ಜಾತಿಗೆ ಸೇರಿದ ಪೇಂಟೆಡ್ ಸ್ಟಾರ್ಕ್, ಬಾರ್ ಹೆಡೆಡ್ ಗೂಜ್, ಬ್ರಾಹ್ಮೀಣಿ ಡಕ್, ವೈಟ್ ಬಿಸ್, ಬ್ಲಾಕ್ ಬಿಸ್, ಬ್ಲಾಕ್ ನೆಕ್ಕಡ್, ಲೀಟಲ್ ಕಾರ್ಮೊರಂಟ್ ಹೀಗೆ ಸುಮಾರು 16ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಈ ಕೆರೆಗೆ ಬರುತ್ತವೆ. ಸದ್ಯ 3000 ಕ್ಕೂ ಅಧಿಕ ಪಕ್ಷಿಗಳು ಇಲ್ಲಿದ್ದು ಮೂರು ತಿಂಗಳಲ್ಲಿ ಇನ್ನು ಹೆಚ್ಚಿನ ಪಕ್ಷಿಗಳು ಕಾಣಸಿಗುತ್ತವೆ. ಇವುಗಳ ಈಜು, ಕಲರವ ಒಂದಕ್ಕಿಂತ ಒಂದು ಭಿನ್ನವಾದ ಪಕ್ಷಿಗಳ ನೋಟ ಎಲ್ಲರನ್ನು ಕೆರೆಯತ್ತ ಸೆಳೆಯುತ್ತಿದೆ.

Edited By : Shivu K
PublicNext

PublicNext

06/12/2021 04:21 pm

Cinque Terre

52.33 K

Cinque Terre

1