ರಾಜ್ಯಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆರಾಯ, ಅವಾಂತರವನ್ನೇ ಸೃಷ್ಟಿಸುತ್ತಿದ್ದಾನೆ. ನಿನ್ನೆ ಆನೇಕಲ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹೊರವಲಯದ ಹೆನ್ನಾಗರ ಗ್ರಾಮದಲ್ಲಿ ರಾಜಕಾಲುವೆ ಒತ್ತುವರಿಯಿಂದ ಕೆರೆ ಪಕ್ಕದ ಜಮೀನು ಸಂಪೂರ್ಣ ಜಲಮಯವಾಗಿದ್ದು, ರೋಜಾ ಗಿಡ , ರಾಗಿ , ಬಾಳೆ ಗಿಡ ಸೇರಿದಂತೆ ಕೆರೆ ಪಕ್ಕದಲ್ಲೇ ಇದ್ದಂತಹ ಅಪಾರ ಬೆಳೆ ಹಾನಿಯಾಗಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡದಿರುವುದೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.
ಇನ್ನು ರಸ್ತೆಗಳೆಲ್ಲಾ ಪುಟ್ಟ ಕೆರೆಯಂತಾಗಿದ್ದು, ರಾಗಿ ಹಳ್ಳಿ ಗೇಟ್ , ಬೇಗೆ ಹಳ್ಳಿ ಯಲ್ಲು ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಜನಸಾಮಾನ್ಯರು ಪರದಾಡುವಂತಾಗಿದೆ.
ತುಮಕೂರಿನಲ್ಲೂ ಭಾರಿ ಮಳೆಗೆ ತೋಟಗಳು ಜಲಾವೃತವಾಗಿದ್ದು,ಕೆರೆಗಳು ಕೋಡಿಬಿದ್ದಿವೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಮುಂತಕದಿರೇನಹಳ್ಳಿ ಯಲ್ಲಿ ಮೇಘ ಸ್ಪೋಟಕ್ಕೆ ಶ್ರೀನಿವಾಸ್ ಎಂಬುವವರಿಗೆ ಸೇರಿದ ಕೋಳಿ ಸಾಕಣಿಕೆ ಕೇಂದ್ರಕ್ಕೆ ಏಕಾಏಕಿ ನೀರು ನುಗ್ಗಿ ಕೋಳಿಯ ಮಾರಣ ಹೋಮದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಸತತ ಮಳೆಯಿಂದ ನೆನೆದಿದ್ದ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಯಲಹಂಕ ಬಳಿಯ ಮನೆಗಳಿಗೆ ನೀರು ನುಗ್ಗಿ ಎಲ್ಲಾ ವಸ್ತುಗಳು ನೀರುಪಾಲಾಗಿದೆ. ಪ್ರತಿ ಮಳೆಯು ಇದೇ ರೀತಿ ಅವಾಂತರ ಸೃಷ್ಟಿಸುತ್ತಿದ್ದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಗರದ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ವರುಣಾರ್ಭಟಕ್ಕೆ ರಾಜ್ಯದ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
PublicNext
19/11/2021 11:16 am