ದಾವಣಗೆರೆ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ದಾವಣಗೆರೆ ನಗರದಲ್ಲಿ ಭಾರೀ ಮಳೆ ಸುರಿದಿದ್ದು, ನಗರದ ಕೆಲವೆಡೆ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ.
ಈರುಳ್ಳಿ ಮಾರ್ಕೆಟ್ ಬಳಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಆಯಾ ತಪ್ಪಿ ಗುಂಡಿಗೆ ಬಿದ್ದ ಬೈಕ್ ಸವಾರ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ. ಈ ವೇಳೆ ಸ್ಥಳೀಯರು ಕೊಚ್ಚಿಕೊಂಡು ಹೋಗುತ್ತಿದ್ದ ಬೈಕ್ ಸವಾರನನ್ನ ರಕ್ಷಿಸಿದ್ದಾರೆ. ಗಾಂಧಿ ವೃತ್ತದ ಅಶೋಕ ಟಾಕೀಸ್ ರಸ್ತೆ, ಈರುಳ್ಳಿ ಮಾರುಕಟ್ಟೆ ಸೇರಿ ಹಲವೆಡೆ ನುಗ್ಗಿರುವ ನೀರು ಅವಾಂತರ ಸೃಷ್ಟಿಸಿದೆ. ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ನೀರು ತುಂಬಿರುವ ರಸ್ತೆಗೆ ಇಳಿಯಲು ವಾಹನ ಸವಾರರು ಆತಂಕ ಪಡುತ್ತಿರುವ ದೃಶ್ಯ ಕಂಡು ಬಂತು.
ಇನ್ನು ದಾವಣಗೆರೆ ನಗರದಲ್ಲಿ ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆ ಕಾರಣ ಅಸಮರ್ಪಕ ಪೈಪ್ ಲೈನ್ ಅಳವಡಿಕೆ. ಪೈಪ್ ಮೂಲಕ ನೀರು ನುಗ್ಗುತ್ತಿದೆ. ಹಲವಾರು ಮನೆಗಳ ಮೇಲೆ ಬೀಳುವ ಮಳೆ ನೀರು ಒಳ ಚರಂಡಿಗೆ ಹರಿದು ಹೋಗುವಂತೆ ಪೈಪ್ ಅಳವಡಿಸಿದ್ದಾರೆ. ಇದರಿಂದ ಅನೇಕ ಬಡ ವರ್ಗದ ಹಾಗೂ ತಗ್ಗು ಇರುವ ಮನೆಗಳ ಒಳಗೆ ನೀರು ಬರುತ್ತಿದೆ. ಈ ಬಗ್ಗೆ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಹಚ್ಚಿನ ಅರಿವು ಮೂಡಿಸಿ ಮಳೆ ನೀರು ಹರಿವಿಕೆಯನ್ನು ಒಳಚರಂಡಿ ಸೇರದಂತೆ, ಪೈಪ್ ಹಾಕದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ ಜಿ ಶ್ರೀಕಾಂತ ಮನವಿ ಮಾಡಿದ್ದಾರೆ.
ಶಂಕರ್ ವಿಹಾರ ಬಡಾವಣೆ ಯಲ್ಲಿ ಮತ್ತೆ ನೀರು ಬಂದಿದ್ದು, ಜನರು ಪರದಾಡುವಂತಾಗಿದೆ. ಭಾರೀ ಮಳೆ ಬಂದಾಗ ಈ ಸಮಸ್ಯೆ ತಲೆದೋರುತ್ತಿದ್ದು, ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
PublicNext
06/10/2021 09:48 pm