ಸಾಗರ: ಕಳೆದ ಕೆಲವು ದಿನಗಳಿಂದ ಒಳ್ಳೆಯ ಮಳೆಯಾಗಿದ್ದರಿಂದ ವಿಶ್ವ ಪ್ರಸಿದ್ಧ ಜೋಗ ಜಲಪಾತವೀಗ ಮೈದುಂಬಿ ಧುಮ್ಮಿಕ್ಕುತ್ತಿದೆ. ಭಾನುವಾರವಂತೂ ಜೋಗದೆಡೆಗೆ ಜನ ಪ್ರವಾಹವೇ ಹರಿದು ಬಂದಿತ್ತು!
ಖಾಸಗಿ ಕಾರುಗಳ ಸಹಿತ ಮಿನಿಬಸ್ ಮತ್ತಿತರ ಪ್ರವಾಸಿ ವಾಹನಗಳೇ ಜೋಗದತ್ತ ದೌಡಾಯಿಸಿದ್ದರಿಂದ ಎನ್ ಎಚ್ 206ರಲ್ಲಿ ವಾಹನಗಳ ಮೆರವಣಿಗೆಯೇ ನಡೆಯುತ್ತಿದೆ ಎಂಬಂತಹ ಚಿತ್ರಣ ಸಾಗರ- ಜೋಗದ ಮಧ್ಯೆ ಜೋರಾಗಿಯೇ ಕಂಡು ಬಂದಿತ್ತು. ಈ ಸಂದರ್ಭ ಮಾಯಾ'ಜಲ' ತಾಣದಲ್ಲಿ ಜಮಾಯಿಸಿದ್ದ ಅಸಂಖ್ಯಾತ ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವನ್ನೇ ಪಡಬೇಕಾಯಿತು.
ಪ್ರವಾಸ ಬಂದವರಿಗೆ ಅನುಕೂಲವಾಗಲೋ ಎಂಬಂತೆ ಎಳೆ ಬಿಸಿಲು ಕೂಡ ಜಲಸಿರಿಯ ವೈಭವ 'ಪ್ರ'ದರ್ಶನಕ್ಕೆ ಸಾಥ್ ನೀಡಿತು. ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಈ ಮೊದಲು ಎರಡು ತಿಂಗಳುಗಳಿಂದ ಜೋಗ ಜಲಪಾತ ವೀಕ್ಷಣೆಗೆ ಆಡಳಿತ ನಿಷೇಧ ಹೇರಿತ್ತು. ಮೂರನೇ ಅಲೆಯ ಭಯಾತಂಕವಿದ್ದರೂ ಹೆಚ್ಚಿನ ಪ್ರವಾಸಿಗರು ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಧಾರಣೆಯನ್ನೂ ಮಾಡದೆ ಜಲಪಾತ ವೀಕ್ಷಣೆ ಸಂಭ್ರಮ, ಸೆಲ್ಫಿ ಖುಷಿಯಲ್ಲೇ ತನ್ಮಯರಾಗಿದ್ದರು!
- ಮನೋಜ್ ಕೆ.ಬೆಂಗ್ರೆ, ಪಬ್ಲಿಕ್ ನೆಕ್ಸ್ಟ್
PublicNext
03/08/2021 09:57 am