ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಮತ್ತೆ ಮಳೆರಾಯನ ಅಟ್ಟಹಾಸ ಮುಂದುವರೆದಿದ್ದು, ಜನಜೀವನ ತತ್ತರಿಸಿ ಹೋಗಿದೆ, ಕಳೆದ ಹಲವು ದಿನಗಳಿಂದ ರಾಯಚೂರು, ಕಲಬುರಗಿ, ಬಾಗಲಕೋಟೆ, ಬೀದರ್, ವಿಜಯಪುರ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು ಪ್ರವಾಹ ಭೀತಿ ಉಂಟಾಗಿದೆ.
ರಾಯಚೂರು ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಜನತೆ ನಲುಗಿ ಹೋಗಿದೆ, ರಸ್ತೆಗಳೆಲ್ಲ ನದಿಗಳಂತಾಗಿವೆ. ತಗ್ಗು ಪ್ರದೇಶದ ಮನೆಗಳೆಲ್ಲ ಜಲಾವೃತಗೊಂಡಿವೆ. ಬೆಂಬಡಿದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಶುಕ್ರವಾರ ಸಂಜೆಯಿಂದ ಅಹೋರಾತ್ರಿ ಮಳೆ ಸುರಿದರೆ, ಶನಿವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನದವರೆಗೂ ಜೋರಾಗಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು.
ರಾಯಚೂರಿನಲ್ಲಂತೂ ಮಳೆ ಎಡೆಬಿಡದೇ ಸುರೀತಿದೆ. ರಸ್ತೆಗಳಲ್ಲಿ ಮೊಳಕಾಲುದ್ದ ನೀರು ಹರೀತಿದೆ. ತಗ್ಗು ಪ್ರದೇಶದ ಮನೆಗಳೆಲ್ಲಾ ಜಲಾವೃತವಾಗಿ ಜನ ಪರದಾಡಿದ್ದಾರೆ. ಮನೆಗಳಿಗೆ ನಿರಂತರ ನೀರು ನುಗ್ಗುತ್ತಿದೆ. ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಬಹುತೇಕ ಭಾಗ ಜಲಾವೃತವಾಗಿದೆ.
ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ನದಿ-ಹಳ್ಳಗಳು ಉಕ್ಕಿ ಹರಿಯುತ್ತಿವೆ. ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಎರಡು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಶುರುವಾದ ಮಳೆ ಇದುವರೆಗೂ ನಿಂತಿಲ್ಲ, ನಿರಂತರ ಮಳೆಗೆ ಜಿಲ್ಲೆಯಲ್ಲಿ 135 ಮನೆಗಳು ಬಿದ್ದಿವೆ. ಸಾವಿರಾರು ಹೆಕ್ಟೆರ್ ಬೆಳೆಗಳು ಜಲಾವೃತಗೊಂಡಿದೆ. ಡೋಣಿ ಮತ್ತು ಭೀಮಾ ನದಿ ಮತ್ತೆ ಉಕ್ಕಿ ಹರಿಯುತ್ತಿವೆ. ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ ಸೇರಿದಂತೆ 8 ಗ್ರಾಮಗಳು ತಾಳಿಕೊಟಿ ಸಂಪರ್ಕವನ್ನ ಕಡಿದುಕೊಂಡಿವೆ. ಆದರೂ ಸೇತುವೆ ಮೇಲೆ ಜನ ಹುಚ್ಚು ಸಾಹಸ ಮಾಡ್ತಿದ್ದಾರೆ.
ಉತ್ತರ ಕರ್ನಾಟಕದ ಧಾರಾಕಾರ ಮಳೆಗೆ ಹಲವೆಡೆ ಬಹುತೇಕ ಸೇತುವೆಗಳು ಜಲಾವೃತಗೊಂಡಿವೆ, ತೊಗರಿ, ಹೆಸರು, ಉದ್ದು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿವೆ, ತಗ್ಗು ಪ್ರದೇಶದಲ್ಲಿನ ಹಲವು ಮನೆಗಳು ಜಲಾವೃತಗೊಂಡಿವೆ.
ಕೊಡಗು, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಿದೆ, ನಾಡದೋಣಿ ಮೀನುಗಾರರು ಆತಂಕದಿಂದ ಸಮುದ್ರಕ್ಕೆ ಇಳಿದಿಲ್ಲ. ಬೋಟುಗಳನ್ನು ದಡದಲ್ಲಿ ಲಂಗರು ಹಾಕಿಸಿದ್ದಾರೆ.
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೀದರ್ ತತ್ತರಿಸಿ ಹೋಗಿದೆ. ಜಿಲ್ಲೆಯ ಜೀವನದಿ ಮಾಂಜ್ರಾ ಉಕ್ಕಿ ಹರಿಯುತ್ತಿದೆ. ಔರಾದ್, ಕಲಾನಗರ ಹಾಗೂ ಬೀದರ್ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗ್ತಿದೆ. ಲಕ್ಷಾಂತರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಮಹಾಮಳೆಗೆ ಜಿಲ್ಲೆಯ ರೈತರು ಕಂಗಾಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನ ಜೀವ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ.
PublicNext
27/09/2020 08:56 am