ವರದಿ: ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಧಾರವಾಡ: ಸಾಮಾನ್ಯವಾಗಿ 250 ಸಿಸಿ ಅಥವಾ 500 ಸಿಸಿ ಬೈಕ್‌ನಲ್ಲಿ ದೇಶ ಸುತ್ತುವ ಹವ್ಯಾಸಿಗರನ್ನು ನಾವು ನೋಡಿದ್ದೇವೆ. ಆದರೆ, ಧಾರವಾಡದ ಉತ್ಸಾಹಿ ಯುವಕನೋರ್ವ ಕೇವಲ 100 ಸಿಸಿ ಬೈಕ್‌ನಲ್ಲಿ ದೇಶ ಸಂಚಾರ ಆರಂಭಿಸಿದ್ದಾರೆ.
ಹೌದು! ದೃಶ್ಯಗಳಲ್ಲಿ ನೀವು ನೋಡುತ್ತಿರುವ ಯುವಕನ ಹೆಸರು ವಿಜೇತಕುಮಾರ ಹೊಸಮಠ. ಹುಬ್ಬಳ್ಳಿಯ ಕೆಎಲ್ಇ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆ ಟು ಕೆ ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಂಬ ವಾಕ್ಯದಡಿ ಈ ದೇಶ ಸಂಚಾರ ಆರಂಭಿಸಿದ್ದಾರೆ. ಈ ರೀತಿ ಇವರು ದೇಶ ಸಂಚಾರ ಆರಂಭಿಸಿರೋದು ತಮ್ಮ ಹವ್ಯಾಸಕ್ಕಲ್ಲ. ಬದಲಿಗೆ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವುದಕ್ಕೋಸ್ಕರ ಈ ದೇಶ ಸಂಚಾರ ಆರಂಭಿಸಿದ್ದಾರೆ.
ಅಕ್ಟೋಬರ್ 8 ರಿಂದ ಧಾರವಾಡದಿಂದ ಆರಂಭವಾಗಿರುವ ವಿಜೇತಕುಮಾರ್ ಪ್ರಯಾಣ ಇದೇ ತಿಂಗಳ 24 ಕ್ಕೆ ಅಂತ್ಯಗೊಳ್ಳಲಿದೆ. 6 ಸಾವಿರ ಕಿಲೋಮೀಟರ್ ಸುತ್ತುವುದು ಈ ಪ್ರಯಾಣದ ಉದ್ದೇಶವಾಗಿದೆ. ನಿತ್ಯವೂ ದಾರಿಯುದ್ದಕ್ಕೂ ಹಳ್ಳಿ ಮತ್ತು ನಗರದ ಜನರಿಗೆ ಧಾರವಾಡದ ಈ ಯುವಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.
ಜಮ್ಮು, ಕಾಶ್ಮೀರ, ಪಂಜಾಬ್, ರಾಜಸ್ಥಾನ, ಕನ್ಯಾಕುಮಾರಿ ಹೀಗೆ ಅನೇಕ ಕಡೆಗಳಲ್ಲಿ ವಿಜೇತ್ ಸಂಚಾರ ಮಾಡಲಿದ್ದಾರೆ. ಇವರ ಈ ಕಾರ್ಯಕ್ಕೆ ಅವರ ಸ್ನೇಹಿತ ಕೂಡ ಸಾಥ್ ನೀಡಿದ್ದಾರೆ. ಕೇವಲ 100 ಸಿಸಿ ಸ್ಪ್ಲೆಂಡರ್ ಬೈಕ್‌ನಲ್ಲಿ ಮಾತ್ರ ಈ ಯುವಕರು ದೇಶ ಸಂಚಾರ ಆರಂಭಿಸಿದ್ದು, ಇವರ ಉದ್ದೇಶ ಸಫಲವಾಗಲಿ ಎಂದು ನಾವೂ ಹಾರೈಸೋಣ.
PublicNext
16/10/2021 08:07 pm