ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಉಡಾಫೆ ವರ್ತನೆ; ನ. ಪಂ ಮಾಸಿಕ ಸಭೆಯಲ್ಲಿ ಆಕ್ರೋಶ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಉಡಾಫೆ ವರ್ತನೆ ಬಗ್ಗೆ ಸದಸ್ಯರ ಆಕ್ರೋಶ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಕಟ್ಟಡಗಳು ತಲೆ ಎತ್ತುತ್ತಿದ್ದು ಕ್ರಮಕ್ಕೆ ತಾರತಮ್ಯ, ಮುಲ್ಕಿಗೆ ಸೂಕ್ತ ಬಸ್ಸು ನಿಲ್ದಾಣ ವಿಳಂಬ ಮೊದಲಾದ ವಿಷಯದ ಬಗ್ಗೆ ನಗರ ಪಂಚಾಯತ್ ಅಧ್ಯಕ್ಷ ಸುಭಾಶ್ ಶೆಟ್ಟಿ ನೇತೃತ್ವದಲ್ಲಿ ತೀವ್ರ ಚರ್ಚೆ ನಡೆಯಿತು.

ಸಭೆ ಶುರುವಾಗುತ್ತಿದ್ದಂತೆ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ಬಗ್ಗೆ ನಪಂ ಸದಸ್ಯರು ಪಕ್ಷ ಬೇಧ ಮರೆತು ಆರೋಗ್ಯ ಕೇಂದ್ರದ ಅವ್ಯವಸ್ಥೆಗಳ ಬಗ್ಗೆ ನಪಂ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಪುಂ ಸದಸ್ಯ ನರಸಿಂಹ ಪೂಜಾರಿ ಮಾತನಾಡಿ ಆಸ್ಪತ್ರೆ ಒಳಗಿನ ಮಹಿಳಾ ವಾರ್ಡಿನಲ್ಲಿ ರೋಗಿಯೊಬ್ಬರು ಫ್ಯಾನ್ ಅವ್ಯವಸ್ಥೆ ಬಗ್ಗೆ ದೂರಿಕೊಂಡಿದ್ದು ಈ ಬಗ್ಗೆ ಆಸ್ಪತ್ರೆ ವೈದ್ಯರ ಬಳಿ ವಿಚಾರಿಸಿದಾಗ ಅವರು ಉಡಾಫೆ ಉತ್ತರ ನೀಡಿ "ನಿಮ್ಮ ಮನೆಯಿಂದ ತಂದು ಫ್ಯಾನ್ ಹಾಕಿಸಿ ಕೊಡಿ "ಎಂದು ಹೇಳಿದ್ದಾರೆ ಎಂದು ಹೇಳಿ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಆಸ್ಪತ್ರೆಯ ವೈದ್ಯರ ನಿರ್ಲಕ್ಷ ಮಿತಿಮೀರುತ್ತಿದ್ದು ಜನರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ನರಸಿಂಹ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದಾಗ ಅವರಿಗೆ ವಿಪಕ್ಷ ಸದಸ್ಯರಾದ ಬಾಲಚಂದ್ರ ಕಾಮತ್ , ಪುತ್ತು ಬಾವ,ಯೋಗೀಶ್ ಕೋಟ್ಯಾನ್, ಈರಣ್ಣ ಅರಳಗುಂಡಿ, ಮಂಜುನಾಥ ಕಂಬಾರ ಮತ್ತಿತರರು ಧ್ವನಿಗೂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆಯೂ ಸದಸ್ಯರು ಪಕ್ಷಭೇದ ಮರೆತು ದೂರಿದರು.

ನಗರ ವ್ಯಾಪ್ತಿಯಲ್ಲಿ ಕಟ್ಟಡ ಸಂದರ್ಭ ಬಡವ-ಬಲ್ಲಿದ ತಾರತಮ್ಯ ವಹಿಸಲಾಗುತ್ತಿದೆ ಎಂದು ಸದಸ್ಯ ಶೈಲೇಶ್ ಕುಮಾರ್ ದೂರಿಕೊಂಡರು. ಈ ಬಗ್ಗೆ ಸ್ಪಷ್ಟ ಪ್ರಶ್ನೆಗೆ ತಿಳಿಸಲಾಯಿತು. ಕಾನೂನು ಬಾಹಿರ ಕಟ್ಟಡ ಬಗ್ಗೆ ಸೂಕ್ತ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಉತ್ತರಿಸಿದರು.

ಸರಕಾರಿ ಯೋಜನೆಯ ಮನೆ ಕಟ್ಟಲು ಮೂಡಾ ಪರವಾನಗಿ ಬಗ್ಗೆ ಹಲವರು ಪ್ರಶ್ನಿಸಿ, ಪರವಾನಗಿ ಅಗತ್ಯವಿಲ್ಲ ಎಂದು ವಾದಿಸಿದರು. ಆದರೆ ನಪಂ ಪರವಾನಗಿ ಕಡ್ಡಾಯ ಎಂದು ಚಂದ್ರ ಪೂಜಾರಿ ಉತ್ತರಿಸಿದರು.

ಮುಲ್ಕಿ ಬಸ್ಸು ನಿಲ್ದಾಣ ಕಾಮಗಾರಿ ವಿಳಂಬ ಬಗ್ಗೆ ಬಾಲಚಂದ್ರ ಕಾಮತ್, ಪುತ್ತುಬಾವ, ಯೋಗೀಶ್ ಕೋಟ್ಯಾನ್ ಸ್ಪಷ್ಟನೆ ಬಯಸಿದರು. ಜಾಗ ಖರೀದಿ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ವಿಳಂಬವಾಗಿದ್ದು, ಆ ಬಳಿಕ ಶೀಘ್ರ ಬಸ್ಸು ನಿಲ್ದಾಣ ಕಾಮಗಾರಿ ನಡೆಯಲಿದೆ ಎಂದರು.

ಕಸ ಸಂಗ್ರಹ ಬಗ್ಗೆ ಪ್ರತೀ ಮನೆಗೆ 2 ಬಕೆಟ್ ವಿತರಿಸುವ ಬಗ್ಗೆ ಚರ್ಚೆ, ನೀರಿನ ಬಿಲ್ ವಸೂಲಾತಿಗೆ ಇಂಟರ್ನೆಟ್ ಆಧಾರಿತ ಬಿಲ್ಲಿಂಗ್ ಯಂತ್ರ ಖರೀದಿಸಲು ನಿರ್ಧರಿಸಲಾಯಿತು.

ನಮ್ಮ ಕ್ಲಿನಿಕ್: ಸರಕಾರದ ಆದೇಶದಂತೆ ನಗರ ವ್ಯಾಪ್ತಿಯ ಕೆಎಸ್ ರಾವ್ ನಗರದ ನಾರಾಯಣ ಗುರು ಸಭಾಭವನದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಯಿತು.

ನಪಂ ಉಪಾಧ್ಯಕ್ಷ ಸತೀಶ್ ಅಂಚನ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ, ಇಂಜಿನಿಯರ್ ಅಶ್ವಿನಿ, ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ನಯನಾ ಮತ್ತು ಮೋಕ್ಷಾ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಸ್ವಾಗತಿಸಿದರು.

Edited By : PublicNext Desk
Kshetra Samachara

Kshetra Samachara

29/08/2022 04:07 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ