ಸುರತ್ಕಲ್: ಸುರತ್ಕಲ್‌ನ ಕಡಂಬೋಡಿಯಲ್ಲಿ ವ್ಯಕ್ತಿಯೋರ್ವರು ಹಳೆ ದಾಖಲೆ ನೀಡಿ ವೃದ್ಧಾಶ್ರಮ ನಡೆಸುತ್ತಿದ್ದು ಅವ್ಯವಸ್ಥೆಯಿಂದ ಕೂಡಿದೆ. ಮಾತ್ರವಲ್ಲ ನಿಶ್ಯ ಕರ್ಕಶ ಹಾರ್ನ್ ಮಾಡಿಕೊಂಡು ಸ್ಥಳೀಯ ಹಿರಿಯ ನಾಗರೀಕರಿಗೆ ಶಾಂತಿ ಭಂಗ ಮಾಡಲಾಗುತ್ತಿದೆ .ಅಲ್ಲದೆ ಅಲ್ಲಿರುವ ವೃದ್ಧರನ್ನೂ ಕೂಡ ಉತ್ತಮವಾಗಿ ನೋಡಿಕೊಳ್ಳುವ ಬಗ್ಗೆ ನಮಗೆ ಸಂದೇಹವಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಸ್ಥಳೀಯ ಅಶ್ರಯ ವೇದಿಕೆ ಸಂಘಟನೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕ್ರಮ ಜರುಗಿಸದ ಕಾರಣ ಶಾಸಕ ಡಾ.ಭರತ್ ಶೆಟ್ಟಿ ವೈ ಅಮಗೆ ದೂರು ನೀಡಿದ ಘಟನೆ ಬುಧವಾರ ಅಹವಾಲು ಸಭೆಯಲ್ಲಿ ನಡೆಯಿತು.
ಮಾಹಿತಿ ಪಡೆದ ಶಾಸಕರು ತತ್‌ಕ್ಷಣ ಪೊಲೀಸರಿಗೆ ಕರೆ ಮಾಡಿ ಅನಧಿಕೃತವಾಗಿದ್ದಲ್ಲಿ ಪೋರ್ಜರಿ ದಾಖಲೆ ಮಾಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು, ಸಂಬಂಧಪಟ್ಟ ಸರಕಾರದ ಇಲಾಖೆಯಿಂದಲೂ ತನಿಖೆ ಮಾಡಿಸುವ ಭರವಸೆ ನೀಡಿದರು. ಸುರತ್ಕಲ್ ಹೃದಯ ಭಾಗದಲ್ಲಿ ಬಿಲ್ಡರ್ ಓರ್ವರು ಭೂಮಿ ಸಮತಟ್ಟು ಮಾಡಿದ್ದು ಮನೆಗೆ ನೀರು ನುಗ್ಗುತ್ತಿದೆ. ಸರಿ ಪಡಿಸಿಕೊಡಿ ಎಂದು ನಾಗರಿಕರು ಮನವಿ ಮಾಡಿಕೊಂಡರು. ಹಿರಿಯ ನಾಗರೀಕರೋರ್ವರು ಮನೆಯಿಲ್ಲ ನಿವೇಶನ ಕೊಡಿ ಎ೦ದು ಅರ್ಜಿ ಹಿಡಿದುಕೊಂಡು ಶಾಸಕರಲ್ಲಿ ಭಿನ್ನವಿಸಿಕೊಂಡರು. ಅಶ್ರಯ ಮನೆ ಯೋಜನೆಯಡಿ ಬಿಪಿಎಲ್ ಪಡಿತರ ವಿದ್ದರೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಹೆದ್ದಾರಿಯಲ್ಲಿ ಅಸಮರ್ಪಕ ಚರಂಡಿಯಿಂದ ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿದೆ ಎಂದು ಹೊಸಬೆಟ್ಟು ನಾಗರೀಕರ ನಿಯೋಗ ದೂರು ನೀಡಿದಾಗ ಶಾಸಕರು ಸ್ವತಃ ವೆಚ್ಚ ಭರಿಸಿ ಪೈಪ್ ಅಳವಡಿಸಲು ಮುಂದಾಗಿದ್ದು ಪಾಲಿಕೆ ಸದಸ್ಯರಿಗೆ ಸೂಚನೆ ನೀಡಿದರು.
ಬಳಿಕ ಮಾಧ್ಯಮದೊ೦ದಿಗೆ ಮಾತನಾಡಿದ ಶಾಸಕರು ಮಳೆಗಾಲದಲ್ಲಿ ತೊಂದರೆ ಉಂಟಾಗುವುದು ಸಾಮಾನ್ಯವಾದರೂ ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಕ್ರಮ ಜರುಗಿಸಲು ಸ0ಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಈಗಾಗಲೇ ಮಳೆ ನೀರು ಹರಿಯುವ ತೋಡು ಸ್ವಚ್ಛತೆ, ರಾಜಕಾಲುವೆ ಸ್ವಚ್ಛತೆ ಮತ್ತಿತರ ತುರ್ತು ಕೆಲಸಗಳಾಗಿದೆ. ಆದರೂ ಪಾಲಿಕೆ ವತಿಯಿಂದ ವಿಶೇಷ ತ೦ಡ ರಚಿಸಿ ಮಳೆಗಾಲದಲ್ಲಿ ತುರ್ತು ಕಾರ್ಯ ನಿರ್ವಹಣೆಗೆ ಸೂಚಿಸಲಾಗುವುದು ಎಂದರು. ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ವೇದಾವತಿ,ಸರಿತಶಶಿಧರ್, ಶೋಭಾ ರಾಜೇಶ್, ಲಕ್ಷ್ಮೀ ಶೇಖರ್ ದೇವಾಡಿಗ, ನಯನ ಆರ್.ಕೋಟ್ಯಾನ್,ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು,ವಿಠಲ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/05/2022 08:15 pm