ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ಅಧ್ಯಕ್ಷ ಸುಭಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಗರ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿ ಮುಖ್ಯಾಧಿಕಾರಿ ಚಂದ್ರಪೂಜಾರಿ ಮಾತನಾಡಿ ಕಳೆದ ಕೆಲ ವರ್ಷಗಳಿಂದ ನ.ಪಂ. ವ್ಯಾಪ್ತಿಯ ಬಪ್ಪನಾಡು ನಿಂದ ಕೋಲ್ನಾಡು ವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಸೂಕ್ತ ಸರ್ವಿಸ್ ರಸ್ತೆ, ದಾರಿದೀಪದ ಅವ್ಯವಸ್ಥೆ ಹಾಗೂ ಅಸಮರ್ಪಕ ಚರಂಡಿ ಕಾಮಗಾರಿಯಿಂದ ಅನೇಕ ಅಪಘಾತಗಳು ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ, ಪೂರ್ಣ ಪ್ರಮಾಣದ ಕಾಮಗಾರಿಗಳು ನಡೆಯದ ಕಾರಣ ಸಾರ್ವಜನಿಕರಿಂದ ದೂರುಗಳು ಬಂದಿದ್ದು ಕೂಡಲೇ ಸರಿಪಡಿಸಿ ಕೊಡಬೇಕು ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಉತ್ತರಿಸಲು ಅನುವಾದಾಗ ನ ಪಂ ಸದಸ್ಯರುಗಳಾದ ಹರ್ಷರಾಜ ಶೆಟ್ಟಿ, ಯೋಗೀಶ್ ಕೋಟ್ಯಾನ್, ಪುತ್ತುಬಾವ, ರಾಧಿಕಾ ಕೋಟ್ಯಾನ್ ಮತ್ತಿತರರು ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಮಳೆಗಾಲದ ಮೊದಲು ಕೂಡಲೇ ಒಳಚರಂಡಿ ಅವ್ಯವಸ್ಥೆಯನ್ನು ಸರಿಪಡಿಸುವುದರ ಜೊತೆಗೆ ಕಾರ್ನಾಡ್ ಬೈಪಾಸ್ ಬಳಿಯ ಶೌಚಾಲಯ ಸರಿಪಡಿಸಲು ಆಗ್ರಹಿಸಿದಗ ಅಧಿಕಾರಿ ಸರಿಪಡಿಸುವ ಭರವಸೆ ನೀಡಿದರು.
ಸಭೆಗೆ ಆಗಮಿಸಿದ ನವಯುಗ ಸಂಸ್ಥೆಯ ಟೋಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನಪಂ ಸದಸ್ಯರು ಹೆಜಮಾಡಿ ಟೋಲ್ ನಲ್ಲಿ ಮುಲ್ಕಿ ನಪಂ ಸದಸ್ಯರಿಗೆ ವಿನಾಯಿತಿ ನೀಡಬೇಕು. ಮುಲ್ಕಿ ನ ಪಂ ನ ಒಂದು ಭಾಗ ಚಂದ್ರ ಶಾನುಭಾಗರ ಕುದ್ರು ಪ್ರದೇಶಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್ ರಸ್ತೆಯಿಂದಲೇ ಹೋಗಬೇಕಾಗುತ್ತದೆ ಎಂದು ವಿವರಿಸಿದರು. ಈ ಬಗ್ಗೆ ಟೋಲ್ ಅಧಿಕಾರಿಗಳು ಪರಿಶೀಲಿಸಲು ಸಮ್ಮತಿಸಿದರು.
ಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ವರ್ಷದಿಂದ ನಡೆಯುತ್ತಿರುವ ಅಧಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ಕೂಡಲೇ ಸರಿಪಡಿಸುವಂತೆ ಮುಖ್ಯಾಧಿಕಾರಿ ಚಂದ್ರಪೂಜಾರಿ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ನ ಪಂ ವ್ಯಾಪ್ತಿಯಲ್ಲಿ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿಯಲ್ಲಿ ಅನಧಿಕೃತ ಕುಡಿಯುವ ನೀರಿನ ಪೈಪ್ ತೆಗೆಯಲು ಹೋದಾಗ ಸಿಬ್ಬಂದಿಗಳಿಗೆ ಸ್ಥಳೀಯರು ಹಲ್ಲೆ ನಡೆಸಲು ಬಂದಿದ್ದಾರೆ ಎಂದು ಕಂದಾಯ ಅಧಿಕಾರಿ ಅಶೋಕ್ ದೂರಿ ಸೂಕ್ತ ರಕ್ಷಣೆಗೆ ಒತ್ತಾಯಿಸಿದರು
ನಪಂ ವ್ಯಾಪ್ತಿಯ ಆಯಾ ವಾರ್ಡಿನಲ್ಲಿ ಕಾಮಗಾರಿ ನಡೆಸುವಾಗ ವಾರ್ಡ್ ನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸದಸ್ಯೆ ವಿಮಲಾ ಪೂಜಾರಿ, ಮಂಜುನಾಥ ಕಂಬಾರ, ಪುತ್ತುಬಾವ ಆಗ್ರಹಿಸಿದರು.
ಲಿಂಗಪ್ಪಯ್ಯಕಾಡು ವಿಜಯಪುರ ಕಾಲೋನಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ತಂದ ವಸ್ತುಗಳನ್ನು ರಸ್ತೆಯಲ್ಲಿ ಹರಡಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ನ ಪಂ.ಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವೀರಣ್ಣ ಆರಳಗುಂಡಿ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಆಸ್ತಿ ತೆರಿಗೆ ಶೇಕಡಾ 3 ಹಾಗೂ ವಾಣಿಜ್ಯ ತೆರಿಗೆ ಶೇಕಡ 10ರಷ್ಟು ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಯಿತು.
ಮಳೆಗಾಲದ ಮೊದಲು ಹೂಳೆತ್ತುವ ಕಾಮಗಾರಿ ನಡೆಸಬೇಕು ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಒತ್ತಾಯಿಸಿದರು.
ಚರ್ಚೆಯಲ್ಲಿ ವಂದನಾ ಕಾಮತ್, ನರಸಿಂಹ ಪೂಜಾರಿ, ಸಂದೀಪ್ ಕುಮಾರ್, ಬಾಲಚಂದ್ರ ಕಾಮತ್ ಮತ್ತಿತರರು ಭಾಗವಹಿಸಿದ್ದರು.
Kshetra Samachara
31/03/2022 02:26 pm