ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಉಳೆಪಾಡಿ, ಕೊಲ್ಲೂರು ಪರಿಸರದ ಕೃಷಿ ಭೂಮಿಗಳನ್ನು ಬೃಹತ್ ಕೈಗಾರಿಕೆಗಳಿಗೆ ನೀಡಲು ಸರಕಾರದ ಭೂಸ್ವಾಧೀನ ವಿರೋಧಿಸಿ ಮಂಗಳವಾರ ಬಳ್ಕುಂಜೆ ಗ್ರಾಮಸಭೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದರು.
ಗ್ರಾಮ ಸಭೆ ವರದಿ ಓದಿ, ಇನ್ನೇನು ಚರ್ಚೆ ಮತ್ತು ಇಲಾಖಾ ಮಾಹಿತಿ ನೀಡಬೇಕಾದ ಸಂದರ್ಭ ಯಾವ ಇಲಾಖೆ ಅಧಿಕಾರಿಗಳು ಬಂದಿದ್ದಾರೆ ಎಂದು ಗ್ರಾಮಸ್ಥರು ಕೇಳಿದ್ದಾರೆ. 5 ಮಂದಿ ಇಲಾಖಾಧಿಕಾರಿಗಳು ಹಾಜರಿದ್ದು, ಕೆಲ ಅಧಿಕಾರಿಗಳು ಬೇರೆ ಕೆಲಸದ ಒತ್ತಡದಲ್ಲಿದ್ದಾರೆ. ಗ್ರಾಮ ಸಭೆಗೆ ಬಂದೇ ಬರುತ್ತಾರೆ ಎಂದು ಪಿಡಿಒ ತಿಳಿಸಿದ್ದಾರೆ.
ಕೈಗಾರಿಕೆಗಳಿಗೆ ಕೊಲ್ಲೂರು, ಬಳ್ಕುಂಜೆ, ಉಳೆಪಾಡಿ ಗ್ರಾಮದ ಫಲವತ್ತಾದ ಪ್ರದೇಶಗಳನ್ನು ಸರಕಾರ ಸ್ವಾಧೀನ ಪಡಿಸಲು ಮುಂದಾಗಿದ್ದರೂ ಈ ಬಗ್ಗೆ ಮಾಹಿತಿ ನೀಡಲು ಕೆಐಡಿಬಿ ಅಧಿಕಾರಿಗಳು ಗ್ರಾಮಸಭೆಗೆ ಯಾಕೆ ಬಂದಿಲ್ಲ? ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಅವರೂ ಇನ್ನೇನು ಬರುತ್ತಾರೆ ಎಂದು ಪಿಡಿಒ ಪ್ರಕಾಶ್ ಉತ್ತರಿಸಿದರು.
ಈ ನಡುವೆ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಬಂದರೂ ಅಧಿಕಾರಿಗಳನ್ನು ಒಳ ಬರಲು ಬಿಡದ ಗ್ರಾಮಸ್ಥರು, ಧಿಕ್ಕಾರ ಕೂಗಿ ಗ್ರಾಮ ಸಭೆಯನ್ನೇ ಬಹಿಷ್ಕರಿಸಿದರು. ಈ ಸಂದರ್ಭ ಗೊಂದಲಮಯ ಸ್ಥಿತಿ ಉಂಟಾಗಿ, ಗ್ರಾಮಸ್ಥರು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸುವ ಸರಕಾರದ ನಿಲುವು ವಿರೋಧಿಸಿ ಧಿಕ್ಕಾರ ಕೂಗಿದರು ಹಾಗೂ ಮುಂದೆ ಭೂ ಸ್ವಾಧೀನ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದರು.
Kshetra Samachara
14/06/2022 06:40 pm