ಮುಲ್ಕಿ: ಶಿವಳ್ಳಿ ಸ್ಪಂದನ ಮಂಗಳೂರು ಆಶ್ರಯದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಅತ್ಯಧಿಕ ಶ್ರೇಯಾಂಕ ಪಡೆದ ಶಿವಳ್ಳಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರವಿವಾರ ಸುರತ್ಕಲ್ ನ ತಡಂಬೈಲ್ ಶ್ರೀ ದುರ್ಗಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಭಟ್ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿ ಎನ್ಐಟಿಕೆ ನಿವೃತ್ತ ಡೀನ್ ಡಾ.ಬಿ.ಆರ್.ಸಾಮಗ ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಮಾತನಾಡಿ ಮಹಾಭಾರತ, ರಾಮಾಯಣ ಮತ್ತು ಬ್ರಾಹ್ಮಣ ಸಂಸ್ಕೃತಿ ಸಂಸ್ಕಾರದ ಬಗ್ಗೆ ಬೆಳಕನ್ನು ಚೆಲ್ಲಿ ಸಮುದಾಯದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಬಾಳ ಭಾಸ್ಕರ ರಾವ್ ಮಾತನಾಡಿ, ಬ್ರಾಹ್ಮಣ ಸಮುದಾಯದ ಮಕ್ಕಳು ತಮ್ಮ ಶ್ರೇಷ್ಠ ಸಂಧ್ಯಾವಂದನೆ ಸಹಿತ ಜಪ ಕರ್ಮಾದಿ ನಿರಂತರ ಮಾಡುತ್ತಾ ಬರಬೇಕು ಎಂದು ಕಿವಿಮಾತು ಹೇಳಿದರು.
ಶಿವಳ್ಳಿ ಸ್ಪಂದನದ ತಾಲೂಕು ಅಧ್ಯಕ್ಷ ಕೃಷ್ಣ ಭಟ್ ಕದ್ರಿ ಶಿವಳ್ಳಿ ಸ್ಪಂದನದ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಶಿವಳ್ಳಿ ಸ್ಪಂದನದ ತಾಲೂಕು ಕಾರ್ಯದರ್ಶಿ ಗಣೇಶ್ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿ, ಸಂಘಟನೆಯಿಂದ ನಡೆಸಿದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು, ಪೋಷಕರು, ಎಲ್ಲಾ ವಲಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸುರತ್ಕಲ್ ವಲಯಾಧ್ಯಕ್ಷ ಪಾಡಿ ರಾಧಾಕೃಷ್ಣ ರಾವ್ ಸ್ವಾಗತಿಸಿದರು.
ಶಿವಳ್ಳಿ ಸ್ಪಂದನ ತಾಲೂಕು ಉಪಾಧ್ಯಕ್ಷ ಬಿ.ಉದಯಶಂಕರ್ ನಿರೂಪಿಸಿದರು. ವಲಯ ಕಾರ್ಯದರ್ಶಿ ಕೃಷ್ಣರಾಜ ಭಟ್ ವಂದಿಸಿದರು.
Kshetra Samachara
13/10/2020 09:37 pm