ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಹಕ್ಕು ವಿಶೇಷ ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿದ್ದು ಸಭೆ ನಾಮಕೆವಾಸ್ತೆ ನಡೆಯಿತು.
ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಅನುದಾನಿತ ತೋಕೂರು ಸುಬ್ರಹ್ಮಣ್ಯ ಶಾಲೆಯ ಮೋದಕ್ ಎನ್ ಶೆಟ್ಟಿ ವಹಿಸಿ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಕ್ಕಳ ಪಾತ್ರ ಮಹತ್ವದ್ದು ಎಂದರು.
ಮಕ್ಕಳ ಮೇಲಿನ ದೌರ್ಜನ್ಯ ಸಹಿತ ಕೋವಿಡ್ ಲಸಿಕೆ ಪಡೆಯಲು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾಪಂ ಸದಸ್ಯ ಮೋಹನ ದಾಸ್ ಮಾತನಾಡಿ ಮಕ್ಕಳ ಹಕ್ಕು ವಿಶೇಷ ಗ್ರಾಮಸಭೆಗೆ ಮಕ್ಕಳ ದೌರ್ಜನ್ಯ ಮತ್ತಿತರ ವಿಷಯ ಬಗ್ಗೆ ಮಾಹಿತಿ ನೀಡಬೇಕಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗೈರುಹಾಜರಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ಇಲಾಖೆಗಳಿಗೆ ನೋಟಿಸ್ ನೀಡುವಂತೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ವ್ಯಾಪ್ತಿಯ ಶಾಲೆಗಳ ಮಕ್ಕಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಪಡುಪಣಂಬೂರು ಗ್ರಾಪಂ ಉಪಾಧ್ಯಕ್ಷೆ ಕುಸುಮಾ ಚಂದ್ರಶೇಖರ್, ಸದಸ್ಯರಾದ ಹರಿಪ್ರಸಾದ್, ಅನಿಲ್, ಪವಿತ್ರ, ಪಿಡಿಒ ರಮೇಶ್ ನಾಯ್ಕ, ಕಾರ್ಯದರ್ಶಿ ಲೋಕನಾಥ ಭಂಡಾರಿ, ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಕಸ ಅಸಮರ್ಪಕ ವಿಲೇವಾರಿ, ಅಪಾಯದ ರಸ್ತೆ ತಿರುವು, ಇಂಗುಗುಂಡಿ ನಿರ್ಮಾಣದ ಬಗ್ಗೆ ವಿವಿಧ ಶಾಲೆಯ ಮಕ್ಕಳ ಪ್ರಶ್ನೆಗಳಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಉತ್ತರಿಸಿದರು.
ರಾಮಣ್ಣ ಶೆಟ್ಟಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನ ನಿರೂಪಿಸಿದರು. ಸಭೆಯಲ್ಲಿ ಮಕ್ಕಳ ಪ್ರಶ್ನೆಗೆ ಉತ್ತರಿಸಬೇಕಾಗಿದ್ದ ಪಂಚಾಯತ್ ಅಧ್ಯಕ್ಷರು ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಕೂಡ ಗೈರು ಹಾಜರಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು.
Kshetra Samachara
24/02/2022 06:46 pm