ಮುಲ್ಕಿ: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಪಡುಪಣಂಬೂರು ಗ್ರಾಪಂ, ದ.ಕ. ಜಿಲ್ಲಾ ಯುವಜನ ಒಕ್ಕೂಟ ಮಾರ್ಗದರ್ಶನದಲ್ಲಿ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಹಳೆಯಂಗಡಿ ಲಯನ್ಸ್ ಮತ್ತು ಲಿಯೋ ಕ್ಲಬ್ ಜಂಟಿ ಆಶ್ರಯದಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು. ಪಡುಪಣಂಬೂರು ಗ್ರಾಪಂ ಕಾರ್ಯದರ್ಶಿ ಲೋಕನಾಥ್ ಭಂಡಾರಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಂಗಳೂರಿನ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ವಿನೋದ್ ಕುಮಾರ್ ಸಸಿಹಿತ್ಲು ಮಾತನಾಡಿ, ಮಹಿಳೆಯರನ್ನು ದೈಹಿಕ, ಮಾನಸಿಕವಾಗಿ ಸಬಲಗೊಳಿಸುವ ಪ್ರಯತ್ನ ಮಾಡಲು ಸಂಘಟನೆಗಳು ನಡೆಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಹಳೆಯಂಗಡಿ ಆರ್ನ ಕ್ಲಿನಿಕ್ ಡಾ.ನಂದಿನಿ ಅವರು ಸ್ತನ ಕ್ಯಾನ್ಸರ್ ನ ಕಾರಣ, ನಿಯಂತ್ರಣ, ಚಿಕಿತ್ಸೆ ಗುಣದ ಬಗ್ಗೆ ಹಾಗೂ ಕ್ಯಾನ್ಸರ್ ವಿಷಯದಲ್ಲಿ ಎಚ್ಚರ ವಹಿಸಲು ವರ್ಷಕ್ಕೊಮ್ಮೆ ಮ್ಯಾಮೋಗ್ರಾಮ್ ಪರೀಕ್ಷೆ, ಮಾಸಿಕ ಸ್ತನ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಯಾದವ್ ದೇವಾಡಿಗ ಮಾತನಾಡಿ, ಮಹಿಳೆಯರು ಮನೆಯಲ್ಲಿ ಹಾಗೂ ಹೊರಗಡೆ ನಾನಾ ಕೆಲಸಗಳಲ್ಲಿ ತೊಡಗಿರುತ್ತಾರೆ. ಈ ಕಾರಣದಿಂದಾಗಿ ಅವರ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವುದನ್ನು ಮರೆಯುತ್ತಾರೆ. ಈ ರೀತಿ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಹಿಳೆಯರು ಭಾಗವಹಿಸಬೇಕು ಎಂದರು. ಪಡುಪಣಂಬೂರು ಪಿಡಿಒ ಅನಿತಾ ಕ್ಯಾಥರಿನ್, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಗೌರವ ಅಧ್ಯಕ್ಷ ನಾರಾಯಣ ಜಿ.ಕೆ. ಉಪಸ್ಥಿತರಿದ್ದರು.
Kshetra Samachara
08/11/2020 09:02 pm