ಮೈಸೂರು: ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲದಕ್ಕೂ ಮ್ಯಾಗಿ ಮಾಡಿ ಕೊಡುತ್ತಿದ್ದರಿಂದ ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದ ಹಳೇ ಪ್ರಕರಣವನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಾಧೀಶರಾದ ಎಂ ರಘುನಾಥ್ ವಿವರಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಲೋಕ್ ಅದಾಲತ್ ಸಂದರ್ಭದಲ್ಲಿ ಮಾತನಾಡಿದ ನ್ಯಾ. ಎಂ ರಘುನಾಥ್ ಅವರು, ನಾನು ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ವೇಳೆ ಮ್ಯಾಗಿ, ನೂಡಲ್ ಹೊರತುಪಡಿಸಿ ಬೇರೆ ಯಾವುದೇ ಅಡುಗೆಯನ್ನು ಮಾಡಲು ನನ್ನ ಹೆಂಡತಿಗೆ ಗೊತ್ತಿಲ್ಲ. ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟಕ್ಕೆ ಪ್ರತಿದಿನ ಮ್ಯಾಗಿ, ನೂಡಲ್ಸ್ ಮಾಡುತ್ತಿದ್ದಳು. ಪ್ರಾವಿಷನ್ ಸ್ಟೋರ್ಗೆ ಹೋದರೆ ರೇಷನ್ ತರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದ. ಈ ಪ್ರಕರಣಕ್ಕೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿತ್ತು. ವಾದ-ಪ್ರತಿವಾದ ಅಲಿಸಿದ ಬಳಿಕ ಅಂತಿಮವಾಗಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಹೇಳಿದರು.
ಗ್ರಾಮೀಣ ಭಾಗಗಳಿಗಿಂತ ನಗರ ಪ್ರದೇಶಗಳಿಂದಲೇ ಹೆಚ್ಚು ವಿಚ್ಛೇದನ ಅರ್ಜಿಗಳು ಬರುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುತ್ತವೆ. ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಸಮಾಜದ ಬಗ್ಗೆ ಅವರ ಭಯ ಮತ್ತು ಕುಟುಂಬದ ಭಾವನೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಅವರನ್ನು ಒತ್ತಾಯಿಸುತ್ತವೆ. ಆದರೆ ನಗರಗಳಲ್ಲಿ ಮಹಿಳೆಯರು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿರುತ್ತಾರೆ. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಆತಂಕ ಪಡುವುದಿಲ್ಲ ಎಂದು ತಿಳಿಸಿದರು.
PublicNext
28/05/2022 11:47 am