ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಶಿಕ್ಷೆಗೆ ಒಳಗಾದವರಲ್ಲಿ ಒಬ್ಬನಾದ ಎಜಿ ಪೆರಾರಿವಾಲನ್‌ಗೆ ಸುಪ್ರೀಂಕೋರ್ಟ್ ಬುಧವಾರ ಬಿಡುಗಡೆಯ ಭಾಗ್ಯ ನೀಡಿದೆ. 31 ವರ್ಷಗಳ ಕಾಲ ಕಂಬಿಯ ಹಿಂದೆ ಕಳೆದಿದ್ದ ಪೆರಾರಿವಾಲನ್ ಬಿಡುಗಡೆಯಾಗಲಿದ್ದಾನೆ.
ಈ ತೀರ್ಪು, ನಳಿನಿ ಶ್ರೀಹರನ್ ಮತ್ತು ಆಕೆಯ ಪತಿ, ಶ್ರೀಲಂಕಾ ಪ್ರಜೆ ಮುರುಗನ್ ಸೇರಿದಂತೆ ಇತರೆ ಆರು ಮಂದಿ ಅಪರಾಧಿಗಳ ಬಿಡುಗಡೆಗೆ ಕೂಡ ದಾರಿ ಸುಗಮ ಮಾಡಿಕೊಡುವ ಸಾಧ್ಯತೆ ಇದೆ. ತೀರ್ಪಿನ ಬಳಿಕ ಹೇಳಿಕೆ ನೀಡಿರುವ ಪೆರಾರಿವಾಲನ್, "ಸತ್ಯ ಮತ್ತು ನ್ಯಾಯ ಎರಡೂ ನಮ್ಮ ಕಡೆಗಿವೆ. ಜನರ ಪ್ರೀತಿ ಮತ್ತು ಬೆಂಬಲ ಇಲ್ಲದೆ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆ.
ಆರ್ಟಿಕಲ್ 142ರ ಅಡಿಯಲ್ಲಿ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿ ವಿಚಾರಣೆ ನಡೆಯುತ್ತಿರುವಾಗಲೇ ಸುಪ್ರೀಂಕೋರ್ಟ್ ಮಹತ್ವದ ಹೆಜ್ಜೆಯನ್ನ ಇಟ್ಟಿದೆ. ಪೆರಾರಿವಾಲನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. ನಾನು 31 ವರ್ಷಗಳಿಂದ ಜೈಲಿನಲ್ಲಿದ್ದೇನೆ, ಬಿಡುಗಡೆ ಮಾಡಬೇಕು ಎಂದು ಕೋರ್ಟ್ಗೆ ಮನವಿ ಸಲ್ಲಿಸಿದ್ದ. ಮೇ 10ರಂದು ವಿಚಾರಣೆಯನ್ನು ಅಂತ್ಯಗೊಳಿಸಿದ್ದ ಕೋರ್ಟ್, ತೀರ್ಪನ್ನ ಇಂದಿಗೆ ಕಾಯ್ದಿರಿಸಿತ್ತು. 2008ರಲ್ಲಿ, ತಮಿಳುನಾಡು ಕ್ಯಾಬಿನೆಟ್ ಆತನನ್ನ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ರಾಜ್ಯಪಾಲರು ಈ ವಿಚಾರವನ್ನು ರಾಷ್ಟ್ರಪತಿಗಳ ಅಂಗಳಕ್ಕೆ ಕಳುಹಿಸಿದ್ದರು.
ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಪದೇ ಪದೇ ಪ್ರಶ್ನೆಗಳನ್ನು ಎತ್ತಿತ್ತು. ರಾಜ್ಯಪಾಲರು ಸಂಪುಟದ ಅನುಮೋದನೆಯ ವಿರುದ್ಧವಾಗಿ ಹೋಗಬಹುದೇ ಎಂಬುದು ಕಾನೂನು ಮತ್ತು ಸಾಂವಿಧಾನಿಕ ಪ್ರಶ್ನೆಯಾಗಿದೆ ಎಂದು ಕೋರ್ಟ್ ಹೇಳಿತ್ತು. ಅಲ್ಲದೇ ಇದೊಂದು ಗಂಭೀರ ವಿಚಾರ. ಫೆಡರಲ್ ವ್ಯವಸ್ಥೆ ಮೇಲೆ ಪರಿಣಾಮವನ್ನು ಬೀರಬಹುದು. ಇದರಿಂದ ಒಕ್ಕೂಟ ವ್ಯವಸ್ಥೆ ನಾಶವಾಗಬಹುದು. ಯಾರೂ ಕಾನೂನಿಗಿಂತ ಮೇಲಲ್ಲ. ಸರ್ಕಾರ ನಮ್ಮ ಆದೇಶವನ್ನು ಪಾಲಿಸಬೇಕು, ಇಲ್ಲದಿದ್ದರೆ ನ್ಯಾಯಾಲಯವು ಆದೇಶವನ್ನು ನೀಡುತ್ತದೆ. ಏಕೆಂದರೆ ಸರ್ಕಾರ ಕಾನೂನು ಪಾಲಿಸದಿದ್ದರೆ ನ್ಯಾಯಾಲಯ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಹೇಳಿತ್ತು.
PublicNext
18/05/2022 04:28 pm