ಬೆಂಗಳೂರು: ಡೆಲಿವರಿ ಬಾಯ್, ಬೈಕ್ ಬಿಡಿಸಿಕೊಳ್ಳಲು ಸಂಚಾರ ಪೊಲೀಸರ ಟೋಯಿಂಗ್ ವಾಹನದ ಹಿಂದೆ ಓಡುವ ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಸದ್ಯ ಈ ವಿಡಿಯೊ ಚಿತ್ರೀಕರಿಸಿದ್ದ ಹರೀಶ್ಗೌಡ ಗುಂಡಗಲ್ ಎಂಬುವರಿಗೆ ಸಂಕಷ್ಟ ಶುರುವಾಗಿದೆ. ಈತನಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಹೌದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಬಗ್ಗೆ ತನಿಖೆ ನಡೆಸಿದ್ದ ಡಿಸಿಪಿ ನೇತೃತ್ವದ ತಂಡ, ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರಿಗೆ ವರದಿ ನೀಡಿದೆ.
‘ವಿಡಿಯೊವನ್ನು ತಿರುಚಿ ಟೋಯಿಂಗ್ ವ್ಯವಸ್ಥೆ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲಾಗಿದೆ. ಇದೊಂದು ಪ್ರಚೋದನಾತ್ಮಕ ಹಾಗೂ ತಿರುಚಿದ ವಿಡಿಯೊ’ ಎಂಬ ಅಂಶ ವರದಿಯಲ್ಲಿದೆ. ಅದನ್ನು ಆಧರಿಸಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತ ಎನ್ನಲಾದ ಹರೀಶ್ ಗೌಡ ಅವರಿಗೆ ನೋಟಿಸ್ ನೀಡಲಾಗಿದೆ. ನಿಗದಿತ ದಿನದಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.
ಸ್ವಲ್ಪ ದೂರಕ್ಕೆ ಹೋಗಿ ವಾಹನ ನಿಲ್ಲಿಸಿದ್ದ ಪೊಲೀಸರು, ಸವಾರನಿಗೆ ಎಚ್ಚರಿಕೆ ನೀಡಿ ಯಾವುದೇ ದಂಡವನ್ನೂ ಕಟ್ಟಿಸಿಕೊಳ್ಳದೇ ಬೈಕ್ ಬಿಟ್ಟು ಕಳುಹಿಸಿದ್ದರು.
ವಾಸ್ತವ ಸಂಗತಿಯನ್ನು ಮುಚ್ಚಿಟ್ಟು, ತಿರುಚಿದ ವಿಡಿಯೊವನ್ನು ಹರಿಬಿಡಲಾಗಿದೆ.
PublicNext
01/02/2022 08:22 am