ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಪ್ರಕಟಿಸಿದೆ.
ಹೌದು ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಒಂದು ವೇಳೆ ಆರೋಪಿ ಸಂತ್ರಸ್ತೆಯನ್ನೇ ಮದುವೆಯಾಗಿದ್ದರೂ ರೇಪ್ ಕೇಸ್ ವಿಚಾರಣೆ ಮುಂದುವರಿಯುವುದು ರದ್ದುಪಡಿಸಲಾಗದು ಎಂಬ ಮಹತ್ವದ ಆದೇಶ ಹೈಕೋರ್ಟ್ ಹೊರಡಿಸಿದೆ.
ಸಾಮಾನ್ಯವಾಗಿ ರೇಪ್ ಪ್ರಕರಣಗಳಲ್ಲಿ ಸಂತ್ರಸ್ತೆಯನ್ನು ವರಿಸಿದಾಗ ಹೈಕೋರ್ಟ್ ‘ಮಾನವೀಯತೆ’ ನೆಲೆಯಲ್ಲಿ ಅತ್ಯಾಚಾರ ಕೇಸನ್ನು ಮುಕ್ತಾಯಗೊಳಿಸಿ ಇಬ್ಬರ ‘ಸುಖ ಸಂಸಾರ’ಕ್ಕೆ ದಾರಿ ಮಾಡಿಕೊಡುತ್ತಿತ್ತು. ಇಲ್ಲೊಂದು ಪ್ರಕರಣದಲ್ಲಿ ಹಿಂದಿನ ನ್ಯಾಯಮೂರ್ತಿಗಳ ತೀರ್ಪುಗಳನ್ನು ಅನುಕರಿಸದೆ, ಆರೋಪಿ ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆಂಬ ಕಾರಣಕ್ಕೆ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಲಾಗದು ಎಂದು ಹೈಕೋರ್ಟ್ ಹೇಳಿದೆ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಜಂಟಿಯಾಗಿ ಕ್ರಿಮಿನಲ್ ಕೇಸ್ ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.
ವಿಜಯಪುರ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ನಡೆಯುತ್ತಿರುವ ಅತ್ಯಾಚಾರ ಆರೋಪ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಅನಿಲ್ ಮತ್ತು ಆತನನ್ನು ಮದುವೆಯಾಗಿರುವ ಸಂತ್ರಸ್ತೆ ಅರ್ಜಿ ಸಲ್ಲಿದ್ದರು. ಅರ್ಜಿಯಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಬಾಲಕಿ ಎನ್ನಲಾದ ಸಂತ್ರಸ್ತೆಗೆ 19 ವರ್ಷ ವಯಸ್ಸಾಗಿತ್ತು. ಆ ಬಳಿಕ ನಾವಿಬ್ಬರೂ ವಿವಾಹವಾಗಿದ್ದೇವೆ. ಆದ್ದರಿಂದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
PublicNext
25/11/2021 08:15 am