ಇಸ್ಲಾಮಾಬಾದ್: ಶತಮಾನಗಳ ಇತಿಹಾಸ ಹೊಂದಿರುವ ಹಿಂದೂ ದೇವಾಲಯದ ಪುನರ್ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸುವಂತೆ ಖೈಬರ್ -ಪಖ್ತುನ್ಖ್ವಾ ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶಿಸಿದೆ. ಉದ್ರಿಕ್ತರಿಂದ ಧ್ವಂಸಗೊಂಡಿರುವ ದೇವಾಲಯ ಮರು ನಿರ್ಮಾಣ ಪೂರ್ಣಗೊಳಿಸುವ ಸಮಯದ ಬಗ್ಗೆ ತಿಳಿಸುವಂತೆಯೂ ಸೂಚಿಸಿದೆ.
ಕಳೆದ ಡಿಸೆಂಬರ್ ನಲ್ಲಿ ಮತಾಂಧ ಜಮೈತ್ ಉಲೇಮಾ -ಇ- ಇಸ್ಲಾ ಪಾರ್ಟಿಯ ಸದಸ್ಯರಿಂದ ಖೈಬರ್ -ಪಖ್ತುನ್ಖ್ವಾ ಪ್ರಾಂತ್ಯದ ಕಾರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು.ಈ ಘಟನೆಯನ್ನು ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು, ತೀವ್ರವಾಗಿ ಖಂಡಿಸಿದ್ದರು. ಈ ದೇವಾಲಯನ್ನು ಪುನರ್ ನಿರ್ಮಾಣ ಮಾಡುವಂತೆ ಕಳೆದ ತಿಂಗಳು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಮುಖ್ಯ ನ್ಯಾಯಾಧೀಶ ಗುಲ್ಜಾರ್ ಅಹ್ಮದ್ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠ, ಸೋಮವಾರ ದೇವಾಲಯ ಧ್ವಂಸಕ್ಕೆ ಸಂಬಂಧಿಸಿದ ಸ್ವಯಂ ಪ್ರೇರಿತ ಕೇಸಿನ ವಿಚಾರಣೆ ನಡೆಸಿತು ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ದೇವಾಲಯ ಧ್ವಂಸಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರು ಹಾಗೂ ವಶಕ್ಕೆ ಪಡೆದ ಹಣದ ಬಗ್ಗೆ ಮಾಹಿತಿ ನೀಡುವಂತೆ ವಿಚಾರಣೆ ವೇಳೆ ನ್ಯಾಯಾಧೀಶ ಗುಲ್ಜಾರ್ ಹೇಳಿದರು. ಈವರೆಗೂ ಯಾವುದೇ ಹಣವನ್ನು ವಶಪಡಿಸಿಕೊಂಡಿಲ್ಲ, ದೇವಾಲಯ ನಿರ್ಮಾಣಕ್ಕಾಗಿ 30.41 ಮಿಲಿಯನ್ ಹಣವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ವಕೀಲ ಇಕ್ರಾಂ ಚೌದರಿ ನ್ಯಾಯಾಲಯಕ್ಕೆ ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ. ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಮುಖ್ಯಸ್ಥರಿಗೂ ಸಮನ್ಸ್ ನೀಡಿ, ಇಲ್ಲಿಯವರೆಗೂ ಆಗಿರುವ ಪ್ರಗತಿ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ನ್ಯಾಯಾಧೀಶ ಗುಲ್ಜಾರ್ ಹೇಳಿದ್ದಾರೆ.
PublicNext
09/02/2021 08:04 pm