ಬೆಂಗಳೂರು: ರಾಜ್ಯದಲ್ಲಿ ಏಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅದರಲ್ಲೂ ಬೆಂಗಳೂರಿನ ಅಧಿಕಾರಿಯೊಬ್ಬರ ಮನೆಯಲ್ಲಿ ದೊರಕುತ್ತಿರುವ ಅಪಾರ ಪ್ರಮಾಣದ ಚಿನ್ನ, ಕಂತೆ ಕಂತೆ ಹಣವನ್ನು ಕಂಡು ಎಸಿಬಿ ಒಂದು ಕ್ಷಣ ದಂಗಾಗಿದೆ.
ಬೆಂಗಳೂರು, ಬಳ್ಳಾರಿ, ಕೋಲಾರ, ಧಾರವಾಡ, ಕೊಪ್ಪಳ, ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ದಾಳಿ ಆರಂಭಿಸಲಾಗಿದೆ. ಇತ್ತ ಬೆಂಗಳೂರು ಸಹಕಾರ ಸಂಘಗಳ ಜಂಟಿ ನಿರ್ದೇಶಕ ಡಿ. ಪಾಂಡುರಂಗ ಗರಗ್ ಅವರಿಗೆ ಸೇರಿದ ವಿಜಯನಗದರದ ಮನೆ, ಜಯನಗರದ ಮನೆ, ಮಲ್ಲೇಶ್ವರಂ ಕಚೇರಿ ಹಾಗೂ ಚಿತ್ರದುರ್ಗದ ಮನೆ ಸೇರಿ ಒಟ್ಟು 5 ಕಡೆ ಎಸಿಬಿ ದಾಳಿ ನಡೆಸಿದೆ.
ಪಾಂಡುರಂಗ ಗರಗ್ ಅವರ ವಿಜಯನಗರದ ಮನೆಯಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳಿಗೆ ಕಂತೆ ಕಂತೆ ಹಣ, ರಾಶಿ ರಾಶಿ ಚಿನ್ನಾಭರಣ ದೊರಕುತ್ತಿದೆ. ಇದರ ಜೊತೆಗೆ ಹಲವು ವಿಭಿನ್ನ ಬ್ಯಾಂಕ್ಗಳ ಪಾಸ್ ಬುಕ್, ಮಹತ್ವದ ದಾಖಲೆಗಳು ದೊರಕಿವೆ. ಇನ್ನೂ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಉಳಿದಂತೆ ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಎಂಜಿನಿಯರ್ ದೇವರಾಜ್ ಕಲ್ಲೇಶ್, ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆಗಳ ವಿಭಾಗದ ಜಂಟಿ ನಿರ್ದೇಶಕ ಕೆ.ವಿ. ಜಯರಾಜ್, ಕೋಲಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಎಸ್.ಎನ್. ವಿಜಯಕುಮಾರ್, ಕೊಪ್ಪಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್, ಲೋಕೋಪಯೋಗಿ ಇಲಾಖೆಯ ಮಾಗಡಿ ಉಪವಿಭಾಗದ ಕಿರಿಯ ಎಂಜಿನಿಯರ್ ಚನ್ನಬಸಪ್ಪ, ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಶ್ರೀನಿವಾಸ್ ಅವರ ಮನೆ ಮಲೆ ದಾಳಿ ನಡೆಸಲಾಗಿದೆ.
PublicNext
02/02/2021 12:46 pm