ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಸಂಬಂಧ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಅವರಿಗೆ ಸಂಕಷ್ಟ ಶುರುವಾಗಿದೆ.
ಹೌದು. ಈ ಪ್ರಕರಣ ಸಂಬಂಧ ಕಂದಾಯ ಇಲಾಖೆಗೆ ಪತ್ರ ಬರೆದಿರುವ ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತಾ, ಆರೋಪಿಗಳ ಆಸ್ತಿ ಜಪ್ತಿ ಮಾಡುವ ಕುರಿತು ಉಲ್ಲೇಖಿಸಿದ್ದಾರೆ. ಈ ಪತ್ರ ಬರೆಯಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಸಿಬಿಐ ವರದಿ ನೀಡಿದ ಬಳಿಕ ಆರೋಪಿತರ ಆಸ್ತಿ ಜಪ್ತಿ ಕುರಿತು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆರೋಪಪಟ್ಟಿ ಸಲ್ಲಿಸಿರುವ 1ರಿಂದ 23ನೇ ಆರೋಪಿಗಳ ಆಸ್ತಿಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಕ್ರಮ ಹಣದಿಂದ ಖರೀದಿಸಿದ ಆಸ್ತಿಗಳು, ಅಕ್ರಮ ನಡೆಸಿದ ಸಂಸ್ಥೆಯ ಹೆಸರಿನಲ್ಲಿರುವ ಆಸ್ತಿಗಳು ಮತ್ತು ಕಂಪನಿಯ ಪ್ರಮೋಟರ್‌ಗಳು, ಪಾಲುದಾರರು, ನಿರ್ದೇಶಕರು, ಸದಸ್ಯರ ಆಸ್ತಿ, ವೈಯಕ್ತಿಕ ಆಸ್ತಿ ಜತೆಗೆ ಕಂಪನಿಯಿಂದ ಅಕ್ರಮ ಲಾಭ ಪಡೆದ 'ಬೇನಾಮಿದಾರ'ರ ಆಸ್ತಿ ಕೂಡ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಡಿಸೆಂಬರ್ 1ರಂದು ಪತ್ರದಲ್ಲಿ ಕೋರಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಈಗಾಗಲೇ ಹಗರಣದ ಪ್ರಮುಖ ರೂವಾರಿ ಮುಹಮ್ಮದ್ ಮನ್ಸೂರ್ ಖಾನ್ ಸೇರಿದಂತೆ ಬಹುತೇಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ, ಆರೋಪಿತ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿಗಳಾದ ಸಿಐಡಿ ಡಿವೈಎಸ್ಪಿ ಶ್ರೀಧರ್, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ, ಇನ್‍ಸ್ಪೆಕ್ಟರ್ ರಮೇಶ್, ಸಬ್‍ಇನ್‍ಸ್ಪೆಕ್ಟರ್ ಗೌರಿಶಂಕರ್ ಆಸ್ತಿಗಳ ಮಾಹಿತಿ ಪಡೆಯುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದು ವರದಿಯಾಗಿದೆ.
PublicNext
14/01/2021 10:37 pm