ದಾವಣಗೆರೆ: ಜಿಲ್ಲೆಯಲ್ಲಿ ಬೃಹತ್ ಅರಣ್ಯ ಹೊಂದಿರುವುದು ಚನ್ನಗಿರಿ ತಾಲೂಕು. ಇಲ್ಲಿನ ಕಾನನ ನೋಡಲು ಬಲು ಸುಂದರ. ಇಲ್ಲಿನ ಪ್ರಕೃತಿದತ್ತ ಗಿಡಗಳನ್ನು ನೋಡುವುದೇ ಒಂದು ಸೌಭಾಗ್ಯ. ಈ ಕಾನನದಲ್ಲಿನ ಮರಗಳು ಒಂದಕ್ಕಿಂತ ಮತ್ತೊಂದು ಡಿಫರೆಂಟ್. ನೋಡಲಷ್ಟೇ ಅಲ್ಲ, ಸಂಪತ್ಬರಿತ ತಾಣ. ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಅರಣ್ಯ ಪ್ರದೇಶ ಪ್ರಕೃತಿ ಸೊಬಗು ಒಡಲಲ್ಲಿ ಇಟ್ಟುಕೊಂಡಿದೆ. ಶ್ರೀಗಂಧದ ಮರಗಳು ಹೆಚ್ಚಾಗಿ ಈ ಕಾನನದಲ್ಲಿ ಕಾಣಸಿಗುತ್ತವೆ. ಇಂತ ಸಂಪದ್ಬರಿತ ಮರಗಳ ಮೇಲೆ ಕಳ್ಳರ ವಕ್ರದೃಷ್ಟಿ ಬಿದ್ದಿತ್ತು. ಆದ್ರೆ, ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳ ಜಾಣ ನಡೆಯಿಂದ ಇದಕ್ಕೆ ಬ್ರೇಕ್ ಬಿದ್ದಿದೆ.
ಹಚ್ಚ ಹಸಿರಿನಿಂದ ಕಂಗೊಳಿಸುವ ದಟ್ಟ ಕಾನನದಲ್ಲಿ ಕಣ್ಣು ಹಾಯಿಸಿದ ಕಡೆಯೆಲ್ಲಾ ಶ್ರೀಗಂಧದ ಮರಗಳು ಕಾಣ ಸಿಗುತ್ತವೆ. ಚನ್ನಗಿರಿ ತಾಲೂಕಿನಾದ್ಯಂತ ಶ್ರೀಗಂಧ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿವೆ. ಆದ್ರೆ, ಶ್ರೀಗಂಧದ ಮರಗಳನ್ನು ಕಳ್ಳರು ಕಳವು ಮಾಡುವ ಪ್ರಕರಣಗಳೂ ಹೆಚ್ಚಾಗಿದ್ದವು. ಅರಣ್ಯ ಪ್ರದೇಶದಲ್ಲಿ ಹುಲುಸಾಗಿ ಬೆಳೆದ ಮರಗಳನ್ನು ನೋಡಿದರೆ ಕಳ್ಳರು ಕ್ಷಣಾರ್ಧದಲ್ಲಿ ಕಳುವು ಮಾಡುತ್ತಿದ್ದರು. ಇದು ಅರಣ್ಯ ಇಲಾಖೆಗೆ ತಲೆನೋವು ತಂದಿತ್ತು.
ಏನಾದ್ರೂ ಮಾಡಿ ಶ್ರೀಗಂಧದ ಮರಗಳ ಕಳುವಿಗೆ ಬ್ರೇಕ್ ಹಾಕಬೇಕು ಅಂತ ಚಿಂತನೆ ನಡೆಸಿದ ಅರಣ್ಯ ಇಲಾಖೆ ತಂತ್ರಜ್ಞಾನದ ಮೊರೆ ಹೋಯಿತು. ವೀರೇಶ್ ನಾಯ್ಕ್ ಅವರು ಇಲ್ಲಿಗೆ ವಲಯ ಅರಣ್ಯಾಧಿಕಾರಿಯಾಗಿ ಬಂದ ಬಳಿಕ ಇದು ಸಾಕಾರಗೊಂಡಿದೆ.
ಎಂಜಿನಿಯರಿಂಗ್ ಹಿನ್ನೆಲೆಯಿಂದ ವೀರೇಶ್ ಅವರು ಬಂದವರಾಗಿದ್ದ ಕಾರಣ ಕಾನನದಲ್ಲಿ ಹಲವು ಶ್ರೀಗಂಧ ಮರಗಳನ್ನು ಗುರುತಿಸಿ ಮೈಕ್ರೋ ಚಿಪ್ ಅಳವಡಿಸಿದ್ದಾರೆ. ಇನ್ನು ಕೆಲವು ಮರಗಳು ಇದ್ದು ಕಾಡಿನೊಳಗೆ ಹುಡುಕಿ ಚಿಪ್ ಅಳವಡಿಸುವ ಕಾರ್ಯ ಮುಂದುವರಿದಿದೆ. ವೀರೇಶ್ ಅವರ ಯೋಜನೆ ಈಗಲೂ ಕೈಹಿಡಿದಿದ್ದು, ಕಾನನದಲ್ಲಿ ಶ್ರೀಗಂಧ ಮರಗಳನ್ನು ಗುರುತಿಸುವ ಕಾರ್ಯ ಈಗಲೂ ಮುಂದುವರಿದಿದೆ.
PublicNext
06/06/2022 05:24 pm