ಬೆಂಗಳೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ದೇಶದ ನಾನಾ ಕಡೆಗಳಲ್ಲಿ ನಿನ್ನೆ (ಶುಕ್ರವಾರ) ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ. ಕೆಲವೆಡೆ ಪೊಲೀಸರ ವಿರುದ್ಧ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಿಂಸಾಚಾರ ನಡೆಸಿದ್ದಾರೆ. ಇತ್ತ ರಾಜ್ಯದ ಬೆಳಗಾವಿ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲೂ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ಈ ಆಕ್ರೋಶದ ಕಿಚ್ಚು ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹರಡುವ ಮುನ್ಸೂಚನೆಯಿದ್ದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಹಿಂಸಾಚಾರ ಘಟನೆಗಳಿಗೆ ಆಸ್ಪದ ನೀಡದಂತೆ ರಾಜ್ಯ ಪೊಲೀಸರು ಹೈ ಆಲರ್ಟ್ ಆಗಿದ್ದಾರೆ.
ಪ್ರತಿಭಟಿಸುವ ನೆಪದಲ್ಲಿ ಕಿಡಿಗೇಡಿಗಳು ಪ್ರತಿಭಟನಾಕಾರರ ಗುಂಪಿನಲ್ಲಿ ಹಿಂಸಾಚಾರ ಕೃತ್ಯಗಳಿಗೆ ಪ್ರಚೋದನೆ ನೀಡಿ ಅಹಿತಕರ ಘಟನೆ ನಡೆಸುವ ಸಾಧ್ಯತೆಯಿದೆ ಎಂದು ರಾಜ್ಯ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ಈ ಮಾಹಿತಿಯಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಿರಿಯ ಪೊಲೀಸರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ತುರ್ತು ಸಭೆ ನಡೆಸಿ ಕೆಲ ಸೂಚನೆ ನೀಡಿದ್ದಾರೆ.
ನೂಪುರ್ ಹೇಳಿಕೆ ಖಂಡಿಸಿ ಸ್ಥಳೀಯ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿದ್ದರಿಂದ ಬೆಳಗಾವಿ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಮುಸ್ಲಿಂ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದವು. ಇದೇ ವಿಚಾರಕ್ಕಾಗಿ ದೇಶದಲ್ಲಿ ಹಲವೆಡೆ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸರು ತಾತ್ಕಾಲಿಕವಾಗಿ ಪ್ರತಿಭಟನೆ- ಧರಣಿಗಳಿಗೆ ಅನುಮತಿ ನೀಡದಿರಲು ತೀರ್ಮಾನಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಚ್ಚರವಹಿಸುವಂತೆ ಜಿಲ್ಲಾ ಎಸ್‌ಪಿಗಳಿಗೆ ಸೂಚನೆ ನೀಡಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಉಡುಪಿ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಅಗತ್ಯನುಗುಣವಾಗಿ ಕೆಎಸ್‌ಆರ್‌ಪಿ ಹಾಗೂ ಸಿಎಆರ್ ತುಕಡಿಗಳನ್ನು ನಿಯೋಜಿಸಲು ತಿಳಿಸಲಾಗಿದ್ದು, ರಜೆಯಲ್ಲಿದ್ದ ಎಲ್ಲಾ ಅಧಿಕಾರಿ ಸಿಬ್ಬಂದಿ ಶೀಘ್ರ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಗಸ್ತು ಹೆಚ್ಚಿಸಿ ಮುಸ್ಲಿಂ ಮುಖಂಡರು ಹಾಗೂ ಮೌಲ್ವಿಗಳು ಮತ್ತು ಧರ್ಮದ ನಾಯಕರೊಂದಿಗೆ ಶಾಂತಿಪಾಲನಾ ಸಭೆ ನಡೆಸಿ ಸುಗಮ ಕಾನೂನು ಸುವ್ಯವಸ್ಥೆ ಬಗ್ಗೆ ಸ್ಥಳೀಯ ಪೊಲೀಸರು ತಿಳುವಳಿಕೆ ಮೂಡಿಸಬೇಕೆಂದು ಆಯಾ ಜಿಲ್ಲಾ ಎಸ್ಪಿಗಳಿಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಾಕೀತು ಮಾಡಿದ್ದಾರೆ.
ಇದರಜೊತೆಗೆ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆ ವಿರೋಧಿಸುವ ಭರದಲ್ಲಿ ಯಾರಾದರೂ ಸಾಮಜಿಕ ಜಾಲತಾಣದಲ್ಲಿ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಿಂಸಾಚಾರಕ್ಕೆ ಪ್ರಚೋದಿಸುವುದು ಕಂಡುಬಂದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಬಂಧಿಸಬೇಕು. ಸುಳ್ಳು ಸುದ್ದಿ ಹಬ್ಬಿಸುವುದು, ಹಿಂಸೆಗೆ ಪ್ರೇರಣೆಯಾಗುವ ಸಂದೇಶ ಹರಿಬಿಡುವುದು, ವಾಕ್ ಸ್ವಾತಂತ್ರ್ಯ ಸೋಗಿನಲ್ಲಿ ಹೇಳಿಕೆ ಅಥವಾ ಭಾಷಣ ಮಾಡಿ ವಿಡಿಯೊ ವೈರಲ್‌ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆಯೂ ಮೌಖಿಕವಾಗಿ ಆದೇಶಿಸಲಾಗಿದೆ.
ಇನ್ನೂ ಬೆಂಗಳೂರು ನಗರದಲ್ಲಿಯೂ ಅಹಿತಕರ ಘಟನೆಗಳಿಗೆ ಆಸ್ಪದ ಕಾರಣವಾಗದಂತೆ ಎಚ್ಚರ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಎಲ್ಲಾ ಡಿಸಿಪಿಗಳಿಗೆ ಸೂಚಿಸಿದ್ದಾರೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಶಾಂತಿ ಸಭೆ ನಡೆಸುವಂತೆ ಸೂಚಿಸಲಾಗಿದೆ.
PublicNext
11/06/2022 09:10 am