ಬೆಂಗಳೂರು: ಪುನರಾವರ್ತಿತ(ರಿಪಿಟರ್ಸ್) ಪಿಯುಸಿ ವಿದ್ಯಾರ್ಥಿಗಳ ಅಂಕ ಪರಿಗಣನೆ ಬಿಕ್ಕಟ್ಟು ಸಂಬಂಧ ಹೈಕೋರ್ಟ್ ಸರ್ಕಾರದ ಮುಂದೆ 75:25 ಸೂತ್ರದ ಸಲಹೆಯನ್ನು ಇಟ್ಟಿದೆ. 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕ್ರಮ ಪ್ರಶ್ನಿಸಿ ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಗುರುವಾರ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ತಾವು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ.50ಅಂಕಗಳನ್ನು ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಮತ್ತೊಂದೆಡೆ ಕೋವಿಡ್ ಹಿನ್ನೆಲೆ 2021ನೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವುದರಿಂದ ವಿದ್ಯಾರ್ಥಿಗಳ ಮನವಿ ಪರಿಗಣಿಸುವುದಿಲ್ಲ ಎಂಬುದಾಗಿ ಸರ್ಕಾರ ಹೇಳುತ್ತಿದೆ. ಹಾಗಾಗಿ, ಎರಡೂ ಕಡೆಯ ವಾದದಲ್ಲಿ ಸಮತೋಲನ ಸಾಧಿಸಲು ಸಿಇಟಿಯ ಶೇ75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಶೇ.25ರಷ್ಟು ಅಂಕಗಳನ್ನು ಪರಿಗಣಿಸಲು ಸಾಧ್ಯವೇ? ಎಂದು ಸರ್ಕಾರವನ್ನು ಪ್ರಶ್ನಿಸಿತು.
ಹಾಗಾಗಿ ಕಳೆದ ಸಾಲಿನಲ್ಲಿ ಪರೀಕ್ಷೆಯಲ್ಲಿ ಬರೆಯದೆ ಉತ್ತೀರ್ಣರಾಗಿರುವ ಪಿಯು ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದಿರುವ ಶೇ.75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ.25ರಷ್ಟು ಅಂಕಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅರ್ಜಿದಾರರು 25 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಪಿಯುಸಿ ಪರೀಕ್ಷೆ ಬರೆದು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸಮನಾಗಿ ಹಿಂದಿನ ವರ್ಷ ಯಾವುದೇ ಪರೀಕ್ಷೆ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಸಮಾನವಾಗಿ ಇಡುವುದು ನ್ಯಾಯಸಮ್ಮತವಲ್ಲ ಎಂದು ಸರ್ಕಾರ ಹೇಳುತ್ತಿದೆ.
ಅಲ್ಲದೇ ಕೆಇಎ ಯಾವುದೇ ತೆರನಾದ ದಾಖಲೆ ಪರಿಶೀಲಿಸುವ ಪ್ರಕ್ರಿಯೆಯಿಂದ ಅರ್ಜಿದಾರ ವಿದ್ಯಾರ್ಥಿಗಳ ಹಕ್ಕು ಮತ್ತು ವಾದಕ್ಕೆ ತೊಂದರೆ ಉಂಟು ಮಾಡುವಂತಿರಬಾರದು ಎಂದು ಹೈಕೋರ್ಟ್ ಸೂಚಿಸಿದೆ.
PublicNext
20/08/2022 03:23 pm