ಲಕ್ನೋ: ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಗೆ ವಹಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಸಂಜೆ ಆದೇಶಿಸಿದ್ದಾರೆ.
ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಏನಿದು ಪ್ರಕರಣ?: ಎರಡು ವಾರಗಳ ಹಿಂದೆ ಹತ್ರಾಸ್‌ನ 19 ವರ್ಷದ ಯುವತಿಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸೆಗಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತಪಟ್ಟ ಯುವತಿಯ ಅಂತ್ಯಕ್ರಿಯೆಯನ್ನು ಉತ್ತರ ಪ್ರದೇಶ ಪೊಲೀಸರು ನಡುರಾತ್ರಿಯಲ್ಲೇ ಮಾಡಿ ಮುಗಿಸಿದ್ದರು. ಅಂತ್ಯಕ್ರಿಯೆಗೆ ತೆರಳಲು ತಮಗೂ ಅವಕಾಶ ನೀಡಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
PublicNext
03/10/2020 09:39 pm