ಬೆಂಗಳೂರು: ಜನಸಾಮಾನ್ಯರು ಮಾಸ್ಕ್ ಹಾಕದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಹಾಗೂ ಕೋವಿಡ್-19 ನಿಯಮ ಉಲ್ಲಂಘಿಸಿದರೆ ದಂಡ ಹಾಕ್ತೀರಿ. ಅದೇ ನಿಯಮ ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಸಾಮಾನ್ಯ ಜನರಿಗಷ್ಟೇ ಕಾನೂನು ಇದೆಯೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಗುರುವಾರ ಕಟುವಾಗಿ ಪ್ರಶ್ನಿಸಿದೆ.
ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆ ಬಂದಿತ್ತು.
ಈ ವೇಳೆ ಕೋವಿಡ್-19 ಮಾರ್ಗಸೂಚಿಗಳನ್ನು ರಾಜಕಾರಣಿಗಳು ಉಲ್ಲಂಘಿಸುತ್ತಿರುವ ಪ್ರಕರಣಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿರುವುದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಜನಪ್ರತಿನಿಧಿಗಳು ಹಾಗೂ ಗಣ್ಯರು ಕೊರೋನಾ ನಿಯಮಗಳನ್ನು ಉಲ್ಲಂಘಿಸಿರುವುದು ಎಲ್ಲೆಡೆ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಬದಲಿಕೆ ಕ್ರಮ ಜರುಗಿಸಲಾಗುತ್ತಿದೆ ಎಂಬುದಾಗಿ ಕೇವಲ ಕಣ್ಣೊರೆಸುವ ಉತ್ತರ ನೀಡಿದೆ. ಅದೇ ಜನಸಮಾನ್ಯರು ಮಾಸ್ಕ್ ಹಾಕದೆ ಸಿಕ್ಕಿಬಿದ್ದರೆ ರೂ.250 ದಂಡ ವಿಧಿಸುತ್ತೀರಿ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ ರಾಜಕಾರಣಿಗಳ ವಿರುದ್ಧ ಏಕೆ ಎಫ್ಐಆರ್ ದಾಖಲಿಸಿಲ್ಲ? ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವ ಸರ್ಕಾರವು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದೆ ಎಂದು ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿದೆ.
PublicNext
06/11/2020 01:47 pm