ಬೆಂಗಳೂರು: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಇಂದು ಸಂಭವಿಸಿದ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಪತನವು ದೇಶಕ್ಕೆ ಭಾರೀ ನಷ್ಟವನ್ನೇ ತಂದಿದೆ. ಭಾರತದ ಮೂರೂ ಸೇನಾಪಡೆಗಳಿಗೂ ಏಕೈಕ ದಂಡನಾಯಕ (ಚೀಫ್ ಆಫ್ ದಿ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್ ಸೇರಿದಂತೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರ್ಘಟನೆ ಬಗ್ಗೆ ದೇಶವೇ ಅಚ್ಚರಿ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹೆಲಿಕಾಪ್ಟರ್ ಪತನಕ್ಕೆ ಸಂಬಂಧಿಸಿದ ಹ್ಯಾಷ್ ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿವೆ. ಇದರಲ್ಲಿ 'ಕರ್ಮ'ಎನ್ನುವ ಟ್ಯಾಗ್ ಕೂಡ ಟ್ರೆಂಡ್ ಆಗಿದೆ.
ಹೆಲಿಕಾಪ್ಟರ್ ದುರಂತದ ಬಗ್ಗೆ ವರದಿ ಬಂದ ಒಂದು ಗಂಟೆಗೂ ಮುನ್ನ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಿವೃತ್ತ ಕರ್ನಲ್ ಬಲ್ಜಿತ್ ಬಕ್ಷಿ ಅವರು ವಿವಾದಾತ್ಮಕ ಟ್ವೀಟ್ ಮೂಲಕ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಬಳಿಕ ಅವರು ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರೂ, ಅದರ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
'ಕರ್ಮವು ಜನರೊಂದಿಗೆ ವ್ಯವಹರಿಸಲು ತನ್ನದೇ ಆದ ಮಾರ್ಗಗಳನ್ನು ಹೊಂದಿದೆ' ಎಂದು ಬಲ್ಜಿತ್ ಬಕ್ಷಿ ಟ್ವೀಟ್ ಮಾಡಿದ್ದರು. ಇದು ಬಿಪಿನ್ ರಾವತ್ ಅವರ ಅಪಘಾತಕ್ಕೆ ಈಡಾದ ಘಟನೆಗೆ ಸಂಬಂಧಿಸಿದ್ದು ಎಂದು ಆರೋಪಿಸಲಾಗಿದೆ. ತನ್ನ ಟ್ವೀಟ್ ವ್ಯಾಪಕ ಆಕ್ರೋಶಕ್ಕೆ ಒಳಾಗುತ್ತಿರುದನ್ನು ಅರಿತ ಕರ್ನಲ್ ಭಕ್ಷಿ ನಂತರ ಇನ್ನೊಂದು ಟ್ವೀಟ್ ಮೂಲಕ, ಸಮಜಾಯಿಶಿ ಮತ್ತು ಕ್ಷಮೆಯಾಚಿಸಿದ್ದಾರೆ.
ಬಿಪಿನ್ ರಾವತ್ ಅವರ ಸಾವಿನ ಸುದ್ದಿ ಅಧಿಕೃತವಾಗಿ ಘೋಷಣೆ ಆಗುವ ಮುನ್ನವನ್ನೇ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್.ಎಸ್. ಪನಾಗ್ ಅವರು ಕೂಡ, 'ರಿಪ್ ಜನರಲ್ ಬಿಪಿನ್ ರಾವತ್' ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
ನಿವೃತ್ತ ಕರ್ನಲ್ ಬಲ್ಜಿತ್ ಬಕ್ಷಿ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಚ್.ಎಸ್. ಪನಾಗ್ ಟ್ವೀಟ್‌ಗಳ ಸ್ಕ್ರೀನ್ ಶಾರ್ಟ್ ಅನ್ನು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ. ಜೊತೆಗೆ "ಶತ್ರುಗಳನ್ನು ಹೊರಗೆಲ್ಲೋ ಹುಡುಕಬೇಕಿಲ್ಲ!" ಎಂದು ಕಿಡಿಕಾರಿದ್ದಾರೆ.
PublicNext
08/12/2021 06:49 pm