ಹೊಸದಿಲ್ಲಿ: ಅತ್ತೆ ಮನೆಯಿಂದ ಹೊರಹಾಕಲ್ಪಟ್ಟ ಮಹಿಳೆಯರ ಪರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಮಹಿಳೆ ತಾನು ಇರುವ ಮನೆಯ ಪಾಲುದಾರಿಕೆ ಪಡೆಯುವ ಮೂಲಕ ತನ್ನ ಹಕ್ಕು ಸಾಧಿಸಲು ಅರ್ಹಳು ಎಂದು ಗುರುವಾರ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಿಳೆ ತನ್ನ ಪತಿಯೊಂದಿಗೆ ವಾಸಿಸುತ್ತಿರುವ ಹಂಚಿಕೆಯ ಮನೆ ಆತನ ಸಂಬಂಧಿಕರಿಗೆ ಸೇರಿದ್ದರೂ ಅಲ್ಲಿ ವಾಸಿಸುವ ಹಕ್ಕನ್ನು ಪಡೆಯಲು ಅರ್ಹವಾಗಿದ್ದಾರೆ ಎಂದು ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಹಾಗೂ ಎಂಆರ್ ಶಾ ಅವರಿರುವ ಮೂವರು ನ್ಯಾಯಾಧೀಶರ ನ್ಯಾಯಪೀಠವು ನ್ಯಾಯಾಲಯದ 2006ರ ತೀರ್ಪನ್ನು ರದ್ದುಪಡಿಸಿತು.
ಅತ್ತೆ-ಮಾವಂದಿರು ಇನ್ನು ಮುಂದೆ ತಮ್ಮ ಸೊಸೆಯನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕಲು ಸಾಧ್ಯವಿಲ್ಲ. ಸುಪ್ರೀಂಕೋರ್ಟಿನ ಈ ತೀರ್ಪು ವಿವಾಹವಾಗಿ ಹೋಗಿರುವ ಮನೆಯಿಂದ ಬಲವಂತವಾಗಿ ಅಥವಾ ಹೊರಗೆ ಹಾಕಲ್ಪಟ್ಟ ಮಹಿಳೆಯರಿಗೆ ದೊಡ್ಡ ಪರಿಹಾರವನ್ನು ಒದಗಿಸುತ್ತಿದೆ.
ಒಂದು ವೇಳೆ ಮಹಿಳೆಯ ಪತಿ ಅವಿಭಕ್ತ ಕುಟುಂಬದಲ್ಲಿ ಇದ್ದು ಅಥವಾ ಪತಿಯ ಸಂಬಂಧಿಕರ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದರೆ ಅಲ್ಲಿಯೂ ಸಹ ತನ್ನ ಹಕ್ಕು ಸಾಧಿಸಲು ಮಹಿಳೆಗೆ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ಹಲವು ಕೌಟುಂಬಿಕ ಕಲಹ ಕೇಸ್ಗಳನ್ನು ಪರಿಶೀಲಿಸಿ, ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದ್ದು. ಕೌಟುಂಬಿಕ ಕಲಹಕ್ಕೆ ತುತ್ತಾಗಿರುವ ಮಹಿಳೆಯರ ಪಾಲಿಗೆ ಇದೊಂದು ಮಹತ್ವದ ಆದೇಶ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ
PublicNext
16/10/2020 02:47 pm