ಸೌಂದರ್ಯ ಪ್ರಜ್ಞೆ ಇರುವವರಿಗೆ ತಮ್ಮ ಚರ್ಮದ ಕಾಳಜಿ ಬಗ್ಗೆ ಅಷ್ಟೇ ಆಸಕ್ತಿ ಇರುತ್ತದೆ. ಮಗುವಾಗಿದ್ದಾಗ ಮುಖದ ಚರ್ಮ ಹೇಗೆ ಯಾವುದೇ ಕಲೆಗಳು ಅಥವಾ ಗುಳ್ಳೆಗಳು ಇಲ್ಲದಂತೆ ನಯವಾಗಿ ಮತ್ತು ಸುಂದರವಾಗಿ ಕಾಣುತ್ತದೆ, ಏಕೆಂದರೆ ಪ್ರೌಢಾವಸ್ಥೆಗೆ ಬಂದ ನಂತರ ಮುಖದ ಮೇಲೆ ಬರುವ ಮೊಡವೆಗಳು ಕೆಲವು ದಿನಗಳ ನಂತರ ಮಾಯವಾದರೂ ಅವುಗಳ ಕಲೆಗಳು ಮಾತ್ರ ಚರ್ಮದ ಮೇಲೆ ಹಾಗೆ ದೀರ್ಘ ಕಾಲದವರೆಗೂ ಉಳಿದು ಬಿಡುತ್ತವೆ.
ಚರ್ಮದ ಕಲೆಗಳನ್ನು ಇಲ್ಲವಾಗಿಸಲೆಂದು ಬಳಕೆ ಮಾಡಲು ಮುಂದಾಗುವ ರಾಸಾಯನಿಕಯುಕ್ತ ಕ್ರೀಂ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರಭಾವ ಬೀರಿ ಕೆಲವರಿಗೆ ಸಮಸ್ಯೆ ಕಡಿಮೆ ಆದರೆ, ಇನ್ನು ಕೆಲವರಿಗೆ ಮೊದಲಿಗಿಂತ ಹೆಚ್ಚಾಗಿ ಚರ್ಮದ ಸಮಸ್ಯೆ ಇನ್ನಷ್ಟು ಜಾಸ್ತಿಯಾಗುತ್ತದೆ.
ನಮ್ಮ ಜೀವನ ಶೈಲಿ ನಮ್ಮ ಆಹಾರ ಶೈಲಿ ನಮ್ಮ ಮಾನಸಿಕ ಆಲೋಚನೆಗಳು ನಮ್ಮ ಚಟುವಟಿಕೆಗಳು ಎಲ್ಲವೂ ಕೂಡ ತಮ್ಮದೇ ಆದ ರೀತಿಯಲ್ಲಿ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳ ಮೇಲೆ ಕೆಲಸ ಮಾಡುತ್ತವೆ.
ಇನ್ನು ಆಹಾರ ಪದ್ಧತಿಯ ವಿಚಾರಕ್ಕೆ ಬರುವುದಾದರೆ, ಮುಖದ ಮೇಲೆ ಮೊಡವೆಗಳು ಗುಳ್ಳೆಗಳು ಅಥವಾ ಇನ್ನಿತರ ಚರ್ಮದ ಸಮಸ್ಯೆಗಳನ್ನು ಹೊಂದಿರುವವರು ತಮ್ಮ ದಿನ ನಿತ್ಯದ ಆಹಾರ ಪದ್ಧತಿಯ ಮೇಲೆ ಸ್ವಲ್ಪ ಗಮನ ವಹಿಸಬೇಕು. ತಮಗೆ ಅತ್ಯಂತ ಪ್ರಿಯವಾದ ಎಣ್ಣೆಯಲ್ಲಿ ಕರಿದ ಆಹಾರಗಳು, ಬೀದಿ ಬದಿಯ ಆಹಾರಗಳು, ಸಂಸ್ಕರಿಸಿದ ಆಹಾರಗಳು, ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡ ಆಹಾರಗಳು ಇತ್ಯಾದಿ.
1 ಸಕ್ಕರೆ ಅಂಶ : -
ನಮ್ಮಲ್ಲಿ ಒಂದು ಭಾವನೆ ಇರುತ್ತದೆ. ಅದೇನೆಂದರೆ ಕೇವಲ ಮಧುಮೇಹ ಇರುವವರು ಮಾತ್ರ ಹೆಚ್ಚು ಸಕ್ಕರೆ ಅಂಶಗಳನ್ನು ಒಳಗೊಂಡ ಆಹಾರಗಳನ್ನು ತಿನ್ನಬಾರದು. ಬೇರೆಯವರಿಗೆ ಸಕ್ಕರೆಯಿಂದ ಯಾವುದೇ ತೊಂದರೆ ಇಲ್ಲ ಎಂದು. ಆದರೆ ಇದು ತಪ್ಪು. ಏಕೆಂದರೆ ಸಕ್ಕರೆಯ ಪ್ರಭಾವಕ್ಕೆ ನಾನಾ ಮುಖಗಳಿವೆ. ಅದರಲ್ಲಿ ನಿಮ್ಮ ಚರ್ಮದ ಸೌಂದರ್ಯವನ್ನು ಹಾಳು ಮಾಡುವ ಗುಣವೂ ಒಂದು. ಹಾಗಾಗಿ ನೀವು ಪ್ರತಿ ದಿನ ಕುಡಿಯುವ ಕಾಫಿ ಅಥವಾ ಚಹಾ ಗೆ ಕಡಿಮೆ ಸಕ್ಕರೆ ಉಪಯೋಗಿಸಿ ಸೇವನೆ ಮಾಡಿದರೆ ಸಾಕಾಗುತ್ತದೆ ಎಂದುಕೊಳ್ಳಬೇಡಿ. ನೀವು ತಿನ್ನುವ ಸಿಹಿ ಪದಾರ್ಥಗಳ ಮೇಲೂ ಸಹ ಕಡಿವಾಣ ಹಾಕಿಕೊಳ್ಳಬೇಕು. ತಂಪು ಪಾನೀಯಗಳು, ಬೇಕರಿ ತಿಂಡಿಗಳು, ಕಾರ್ನ್ ಸಿರಪ್ ಇತ್ಯಾದಿಗಳ ಮೇಲೆ ನಿಮ್ಮ ಹಿಡಿತವಿರಲಿ.
2 ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಅಂಶಗಳು : -
ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡಿರುವ ಆಹಾರಗಳು ಎಲ್ಲರಿಗೂ ಒಳ್ಳೆಯದು. ಆದರೆ ಚರ್ಮದ ಸಮಸ್ಯೆಗಳನ್ನು ಒಳಗೊಂಡಿರುವವರಿಗೆ ಮಾತ್ರ ಇವು ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳುತ್ತಾರೆ. ಅಕ್ಕಿ ಹಾಗೂ ಗೋಧಿಯಿಂದ ತಯಾರು ಮಾಡಿದ ಯಾವುದೇ ಆಹಾರ ಪದಾರ್ಥಗಳು ಚರ್ಮದ ಸಮಸ್ಯೆ ಇರುವವರಿಗೆ ಅಷ್ಟಾಗಿ ಸರಿ ಹೊಂದುವುದಿಲ್ಲ ಎಂದು ತಿಳಿದು ಬಂದಿದೆ.
ಹೆಚ್ಚಾಗಿ ಬ್ರೆಡ್, ಬನ್, ಕೇಕ್, ಪೇಸ್ಟ್ರಿ ಗಳನ್ನು ತಿನ್ನುವವರು ತಮ್ಮ ಸೌಂದರ್ಯದ ಬಗ್ಗೆ ಅತೀವವಾದ ಕಾಳಜಿ ಹೊಂದಿದ್ದರೆ, ದಯವಿಟ್ಟು ಇಂತಹ ಆಹಾರಗಳಿಂದ ಸ್ವಲ್ಪ ದೂರ ಉಳಿಯಿರಿ. ನಾರಿನ ಅಂಶ ಕಡಿಮೆ ಇರುವ ಈ ಆಹಾರಗಳು ನಿಮ್ಮ ರಕ್ತದ ಹರಿವಿನಲ್ಲಿ ಬಹಳ ಬೇಗನೆ ಸೇರ್ಪಡೆಗೊಂಡು ನಿಮ್ಮ ಚರ್ಮದ ಸಮಸ್ಯೆಗೆ ಕಾರಣವಾಗುತ್ತವೆ.
3 ಡೈರಿ ಉತ್ಪನ್ನಗಳು : -
ಡೈರಿ ಉತ್ಪನ್ನಗಳು ಎಂದರೆ ಹಾಲು, ಮೊಸರು, ಬೆಣ್ಣೆ,, ತುಪ್ಪ ಇತ್ಯಾದಿ. ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಎಲ್ಲಾ ಹಾಲಿನ ಪದಾರ್ಥಗಳಲ್ಲಿ ಜಿಡ್ಡಿನ ಅಂಶ ಹೆಚ್ಚಾಗಿರುತ್ತದೆ. ನೀವು ಮೊಡವೆಗಳ ಸಮಸ್ಯೆ ಇದೆ ಎಂದು ಚರ್ಮ ರೋಗ ತಜ್ಞರ ಬಳಿ ಹೋದರೆ ಅವರು ಮೊಟ್ಟ ಮೊದಲು ನಿಮಗೆ ಹೇಳುವುದು ಜಿಡ್ಡಿನ ಅಂಶ ಹೆಚ್ಚಾಗಿರುವ ಯಾವುದೇ ಆಹಾರವನ್ನು ತಿನ್ನಬೇಡಿ ಎಂದು.
ಏಕೆಂದರೆ ಜಿಡ್ಡಿನ ಅಂಶಕ್ಕೂ ನಿಮ್ಮ ಚರ್ಮದ ಮೇಲೆ ನಿಮ್ಮ ಕಣ್ಣೆದುರಿಗೆ ಕಂಡು ಬರುತ್ತಿರುವ ಸಮಸ್ಯೆಗಳಿಗೂ ನೇರವಾದ ಸಂಬಂಧವಿದೆ. ಹಾಗಾಗಿ ಪ್ರತಿ ದಿನ ಹಾಲು ಕುಡಿಯುವ ಅಭ್ಯಾಸ ಇದ್ದವರು ಈ ವಿಚಾರವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.
ಜಂಕ್ ಫುಡ್ : -
ಇತ್ತೀಚಿನ ಯುವಜನತೆ ಬೀದಿ ಬದಿಯ ಜಂಕ್ ಫುಡ್ ದಾಸ್ಯಕ್ಕೆ ಹೆಚ್ಚು ಒಳಗಾಗುತ್ತಿದ್ದಾರೆ. ಇದೊಂದು ಅನಾರೋಗ್ಯಕರ ಆಹಾರ ಎಂದು ಪ್ರತಿಯೊಬ್ಬರಿಗೂ ಗೊತ್ತು. ಆದರೂ ಕೂಡ ಸಂಜೆಯ ಸ್ನಾಕ್ಸ್ ಸಮಯದಲ್ಲಿ ಜಂಕ್ ಫುಡ್ ಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅವರು ಬಳಕೆ ಮಾಡುವ ಅದೆಷ್ಟೋ ದಿನಗಳ ಸಾಸ್, ಟೊಮೆಟೊ ಕೆಚಪ್ ಗಳು ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ.
ಹಾಗಾಗಿ ಸಾಧ್ಯವಾದಷ್ಟು ಹೊರಗಿನ ಅದರಲ್ಲೂ ಬೀದಿ ಬದಿಯ ಜಂಕ್ ಫುಡ್ ಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿಕೊಂಡು ಮನೆಯ ಆಹಾರಗಳಿಗೆ ಹೆಚ್ಚು ಒತ್ತು ನೀಡಿ.
ನಮ್ಮ ಮೆದುಳಿನಲ್ಲಿ ಬರುವ ಅಹಿತಕರ ಆಲೋಚನೆಗಳು ಕೆಲವೊಮ್ಮೆ ನಮ್ಮ ದೇಹದಲ್ಲಿ ಅವಶ್ಯವಿಲ್ಲದ ಹಾರ್ಮೋನುಗಳನ್ನು ಹೆಚ್ಚು ಉತ್ಪತ್ತಿ ಮಾಡಿ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತವೆ.
PublicNext
22/09/2020 03:09 pm