ಬೇಕಾಗುವ ಸಾಮಗ್ರಿಗಳು: ಉದ್ದಿನಬೇಳೆ – 2 ಟೀ ಚಮಚ, ಹುರಿಗಡಲೆ – 2 ಟೀ ಚಮಚ, ಅಕ್ಕಿಹಿಟ್ಟು – 2 ಕಪ್, ಅಚ್ಚಖಾರದ ಪುಡಿ – 1 ಟೀ ಚಮಚ, ಜೀರಿಗೆ – 1 ಟೀ ಚಮಚ, ಎಳ್ಳು – 1 ಟೀ ಚಮಚ, ಇಂಗು – 1/2 ಟೀ ಚಮಚ, ಉಪ್ಪು –ರುಚಿಗೆ ತಕ್ಕಷ್ಟು, ಕಡಲೆಬೇಳೆ– 2 ಟೇಬಲ್ ಚಮಚ (1 ಗಂಟೆ ನೆನೆಸಿಡಿ), ಚಿಕ್ಕದಾಗಿ ಕತ್ತರಿಸಿದ ಕರಿಬೇವು – 10 ಎಲೆಗಳು, ಬಿಸಿ ಮಾಡಿದ ಎಣ್ಣೆ – 2 ಟೇಬಲ್ ಚಮಚ, ಹಿಟ್ಟು ಕಲೆಸಲು ನೀರು, ಕರಿಯಲು ಎಣ್ಣೆ.
ತಯಾರಿಸುವ ವಿಧಾನ: ಮೊದಲು ಉದ್ದಿನಬೇಳೆಯನ್ನು ಪರಿಮಳ ಬರುವರೆಗೆ ಹುರಿಯಿರಿ. ನಂತರ ಮಿಕ್ಸಿಯಲ್ಲಿ ಹುರಿದ ಉದ್ದಿನಬೇಳೆ ಮತ್ತು ಹುರಿಗಡಲೆಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬೌಲಿನಲ್ಲಿ ಅಕ್ಕಿಹಿಟ್ಟನ್ನು ಹಾಕಿ.
ಜೊತೆಗೆ ಅಚ್ಚಖಾರದ ಪುಡಿ, ಜೀರಿಗೆ, ಎಳ್ಳು, ಇಂಗು, ಉಪ್ಪು, ಪುಡಿ ಮಾಡಿಕೊಂಡ ಉದ್ದಿನಬೇಳೆ ಮತ್ತು ಹುರಿಗಡಲೆ ಮಿಶ್ರಣ, ಕರಿಬೇವಿನಎಲೆ ಹಾಗೂ ನೆನೆಸಿಟ್ಟ ಕಡಲೆಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹಿಟ್ಟಿಗೆ ಬಿಸಿ ಮಾಡಿದ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ.
ಈಗ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಳ್ಳುತ್ತಾ ಕಲೆಸಿಕೊಳ್ಳಿ. ಹಿಟ್ಟು ಮೃದುವಾಗಿ ರೊಟ್ಟಿಯ ಹಿಟ್ಟಿನ ಹದದಲ್ಲಿರಲಿ.
ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಹಿಟ್ಟಿನಿಂದ ತಯಾರಿಸಿಕೊಳ್ಳಿ, ಈ ಉಂಡೆಗಳನ್ನು ಬಟರ ಪೇಪರ ಅಥವಾ ಪ್ಟಾಸ್ಟಿಕ್ ಪೇಪರಿಗೆ ಎಣ್ಣೆಯನ್ನು ಸವರಿ ತೆಳುವಾಗಿ ತಟ್ಟಿಕೊಳ್ಳಿ. ಇದನ್ನು ಬಿಸಿ ಮಾಡಿದ ಎಣ್ಣೆಯಲ್ಲಿ ಹಾಕಿ ಎರಡೂ ಬದಿಯನ್ನು ಗರಿಗರಿಯಾಗಿ ಕೆಂಬಣ್ಣ ಬರುವರೆಗೆ ಬೇಯಿಸಿ.
ಗಟ್ಟಿಯಾದ ಡಬ್ಬಿಯಲ್ಲಿ ಗಾಳಿಯಾಡದಂತೆ ಹಾಕಿಟ್ಟರೆ ಆಗಾಗ ಸವಿಯುತ್ತಿರಬಹುದು.
PublicNext
15/12/2020 07:35 pm