ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಪ್ರೋ ಸೇರಿ ಹೆಸರಾಂತ ಕಂಪನಿಗಳಿಂದ ಫ್ರೆಶರ್ಸ್‌ಗೆ ಬಿಗ್ ಶಾಕ್- ಉದ್ಯೋಗ ಅಭದ್ರತೆ.!

ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿದ್ದಾಗಲೇ ಸಂದರ್ಶನದ ಮೂಲಕ ಫ್ರೆಶರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಉದ್ಯೋಗದ ಆಫರ್‌ ಲೆಟರ್‌ಗಳನ್ನು ಸಹ ನೀಡಿದ್ದ, ಹೆಸರಾಂತ ಐಟಿ ಕಂಪನಿಗಳು ಇದೀಗ ಅವರಿಗೆ ಶಾಕ್ ನೀಡಿವೆ. ಹೀಗೆ ಆಯ್ಕೆಯಾದ ನೂರಾರು ಮಂದಿಗೆ ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮೊದಲಾದ ಕಂಪನಿಗಳು ಈಗ ಉದ್ಯೋಗ ರದ್ದುಗೊಳಿಸಿರುವ ಮಾಹಿತಿಯನ್ನು ನೀಡಿವೆ ಎಂದು ತಿಳಿದು ಬಂದಿದೆ.

ತಾವು ಹೆಸರಾಂತ ಐಟಿ ಕಂಪನಿಗಳಿಗೆ ಆಯ್ಕೆಯಾದ ಸಂತಸದಲ್ಲಿದ್ದ ಫ್ರೆಶರ್ಸ್ ಗಳು ಈಗ ಉದ್ಯೋಗ ನಿರಾಕರಣೆಯ ಮಾಹಿತಿ ಸಿಗುತ್ತಿದ್ದಂತೆ ಕಂಗಾಲಾಗಿದ್ದಾರೆ. ಅಲ್ಲದೇ ತಮಗೆ ಈ ಕಂಪನಿಗಳಲ್ಲಿ ಉದ್ಯೋಗ ಸಿಕ್ಕ ಕಾರಣ ಇತರೆ ಕಂಪನಿಗಳಿಗೂ ಸಹ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿರಲಿಲ್ಲವೆಂದು ಹೇಳಲಾಗಿದ್ದು, ಇದೀಗ ಅತಂತ್ರರಾಗಿದ್ದಾರೆ.

ಉದ್ಯೋಗ ನಿರಾಕರಣೆ ಇ-ಮೇಲ್ ಕಳಿಸುವ ವೇಳೆ ನಿಮ್ಮ ಶೈಕ್ಷಣಿಕ ಅರ್ಹತೆ ನಾವು ನಿಗದಿಪಡಿಸಿದ ಮಟ್ಟದಲ್ಲಿಲ್ಲ ಎಂದು ತಿಳಿಸಲಾಗಿದೆ ಎನ್ನಲಾಗಿದ್ದು, ಹಾಗಾದರೆ ಸಂದರ್ಶನದ ಬಳಿಕ ಆಫರ್ ಲೆಟರ್ ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಈಗ ಮೂಡಿದೆ.

ಬಹುತೇಕ ಫ್ರೆಶರ್ಸ್ ಗಳಿಗೆ ಏಳೆಂಟು ತಿಂಗಳ ಹಿಂದೆಯೇ ಆಫರ್ ಲೆಟರ್ ಸಿಕ್ಕಿದೆ ಎನ್ನಲಾಗಿದ್ದು, ಇದೀಗ ಇಂಜಿನಿಯರಿಂಗ್ ಅಂತಿಮ ವರ್ಷದ ಫಲಿತಾಂಶವೂ ಹೊರ ಬಿದ್ದಿದೆ. ಹೀಗಾಗಿ ಇನ್ನೇನು ಕೆಲ ದಿನಗಳಲ್ಲೇ ಉದ್ಯೋಗಕ್ಕೆ ಹೋಗಬಹುದೆಂಬ ಕನಸು ಕಂಡಿದ್ದ ಇವರುಗಳು ಇದೀಗ ನಿರಾಕರಣೆ ಇ-ಮೇಲ್ ಬರುತ್ತಿರುವ ಕಾರಣ ನಿರಾಸೆಗೊಂಡಿದ್ದಾರೆ.

ಮೂಲಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಐಟಿ ವಲಯದ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತಿರುವುದು, ಜೊತೆಗೆ ವಿಶ್ವ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದೆಂಬ ಕಾರಣಕ್ಕೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಐಟಿ ಕಂಪನಿಗಳು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ. ಈಗಾಗಲೇ ಆಫರ್ ಲೆಟರ್ ಕೊಟ್ಟಿದ್ದವರಿಗೂ ಸಹ ಈಗ ಉದ್ಯೋಗ ನಿರಾಕರಣೆಯ ಇ ಮೇಲ್ ಕಳಿಸಲಾಗುತ್ತಿದೆ ಎಂದು ಹೇಳಲಾಗಿದೆ.

Edited By : Abhishek Kamoji
PublicNext

PublicNext

03/10/2022 05:09 pm

Cinque Terre

26.7 K

Cinque Terre

2