ದಾವಣಗೆರೆ: ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಹರಿಹರ ತಾಲೂಕಿನ ಉಕ್ಕಡಗಾತ್ರಿ ಸುತ್ತಮುತ್ತ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹರಿಹರ ತಾಲೂಕಿನ ಚಿಮ್ಮನಕಟ್ಟಿ- ಉಕ್ಕಡಗತ್ರಿ ಗ್ರಾಮದ ರಸ್ತೆ ಸಂಪರ್ಕ ಕಡಿತವಾಗಿದ್ದು, ಸೇತುವೆಯ ಮೇಲೆ ಹರಿಯುವ ನೀರಿನಲ್ಲೇ ಪ್ರಾಣ ಒತ್ತೆಯಿಟ್ಟು ಜನರು ಓಡಾಡುತ್ತಿದ್ದಾರೆ.
ಪತ್ನಿಯನ್ನ ಬೈಕ್ ಮೇಲೆ ಕೂರಿಸಿಕೊಂಡು ಹರಿಯೋ ನೀರಿನಲ್ಲಿ ವ್ಯಕ್ತಿ ದಾಟಿದ್ದು, ಸ್ವಲ್ಪ ಎಡವಟ್ಟಾಗಿದ್ದರೂ ಅಪಾಯ ಆಗುತ್ತಿತ್ತು. ಅದೃಷ್ಟವಶಾತ್ ಏನೂ ಆಗಿಲ್ಲ. ಚಿಮ್ಮನಕಟ್ಟಿ- ಉಕ್ಕಡಗಾತ್ರಿ ಮಧ್ಯದ ಸೇತುವೆ ಮೇಲೆ ಈ ಘಟನೆ ನಡೆದಿದೆ.
ಸುಮಾರು 50ಕ್ಕೂ ಅಧಿಕ ವರ್ಷಗಳಿಂದ ನದಿ ನೀರು ಉಕ್ಕಿ ಹರಿಯುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.ಇತ್ತ ಮತ್ತೊಂದು ರಸ್ತೆ ಉಕ್ಕಡಗತ್ರಿ ಫತೆಪುರ- ನಂದಿಗಾವಿ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಬಂದ್ ಆಗಿದೆ. ಅತಿಯಾಗಿ ಮಳೆಯಾದಾಗ ನಡುಗಡ್ಡೆಯಾಗೋ ಉಕ್ಕಡಗಾತ್ರಿ ಗ್ರಾಮದ ನೀರಿನಲ್ಲಿ ಮುಳುಗಡೆಯಾಗೋ ರಸ್ತೆಗೆ ಸೇತುವೆ ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರತಿ ಬಾರಿ ಅಧಿಕಾರಿಗಳು ಭೇಟಿ ನೀಡಿ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡುತ್ತಾರೆಯೇ ಹೊರೆತು ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
17/07/2022 05:19 pm