ಉಡುಪಿ: ಲಾಕ್ ಡೌನ್ ಬಳಿಕ ಮಠಕ್ಕೆ ಹೊರ ಜಿಲ್ಲೆ, ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಆದರೆ, ಹೀಗೆ ಬಂದ ಭಕ್ತಾದಿಗಳಿಗೆ ಇಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ! ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆ ಕಟ್ಟಿಸಿ ಕೊಟ್ಟಿರುವ ಶೌಚಾಲಯ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಸಾಕಾಗುತ್ತಿಲ್ಲ.
ಭಕ್ತರ ಉಪಯೋಗಕ್ಕೆಂದೇ ಕಳೆದ ಪಲಿಮಾರು ಶ್ರೀ ಪಾದರ ಪರ್ಯಾಯದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಸ್ವಚ್ಛಾಂಗಣ ನಿರ್ಮಿಸಲಾಗಿತ್ತು. ಯಾತ್ರಾರ್ಥಿಗಳಿಗೆ ಸ್ನಾನಗೃಹ ಹಾಗೂ ಹೈಟೆಕ್ ಶೌಚಾಲಯವನ್ನು ಓಎನ್ ಜಿಸಿ ಹಾಗೂ ಎಂಆರ್ ಪಿಎಲ್ ನಿರ್ಮಿಸಿ ಕೊಟ್ಟಿತ್ತು. ಮುಖ್ಯ ಮಂತ್ರಿ ಬಿಎಸ್ ವೈ ಆಗ ಉದ್ಘಾಟನೆ ಕೂಡ ಮಾಡಿದ್ದರು. ಆದರೆ, ಸದ್ಯಕ್ಕಿರುವ ಪರ್ಯಾಯ ಮಠ ಮಾತ್ರ ಈವರೆಗೂ ಇದನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡುತ್ತಿಲ್ಲ. ಹೀಗಾಗಿ ಮಠಕ್ಕೆ ಬರುವ ಭಕ್ತರಿಗೆ ಭಾರಿ ಸಮಸ್ಯೆಯಾಗಿದೆ.
ಇನ್ನು, ದಾನಿಗಳು ಭಕ್ತರ ಸೌಲಭ್ಯಕ್ಕಾಗಿ ಕಟ್ಟಿಕೊಟ್ಟಿರುವ ಈ ಸ್ವಚ್ಛಾಂಗಣದಲ್ಲಿ ದುಬಾರಿ ದರಗಳ ಬೋರ್ಡ್ ನೇತು ಹಾಕಲಾಗಿದೆ. ದಾನಿಗಳು ನಿರ್ಮಿಸಿರುವ ಶೌಚಾಲಯದಲ್ಲಿ ಮಠದ ಆಡಳಿತ ಮಂಡಳಿ ಕಾಸು ಮಾಡೋಕೆ ಹೊರಟ್ಟಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.
'ದೇವರು ಕೊಟ್ಟರೂ ಪೂಜಾರಿ ಬಿಡ' ಎಂಬ ಗಾದೆ ಮಾತಿನಂತೆ ದಾನಿಗಳು ಭಕ್ತರ ಅನುಕೂಲಕ್ಕಾಗಿ ಶೌಚಾಲಯಗಳನ್ನು ಕಟ್ಟಿಸಿಕೊಟ್ಟರೂ ಕೂಡ ಮಠದ ಆಡಳಿತ ಮಂಡಳಿ ಹಾಗೂ ಶ್ರೀ ಕೃಷ್ಣ ಪ್ರತಿಷ್ಠಾನ ಶೌಚಾಲಯಕ್ಕೆ ಬೀಗ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಠದ ಆಡಳಿತ ಮತ್ತು ಶ್ರೀ ಕೃಷ್ಣ ಪ್ರತಿಷ್ಠಾನದ ಉಸ್ತುವಾರಿಗಳು, ದಾನಿಗಳು ನೀಡಿರುವ ಶೌಚಾಲಯವನ್ನು ಉಚಿತವಾಗಿ ಸಾರ್ವಜನಿಕರ ಉಪಯೋಗಕ್ಕೆ ತೆರೆಯುವಂತೆ ಒತ್ತಾಯಗಳು ಬಲವಾಗಿ ಕೇಳಿ ಬರುತ್ತಿದೆ.
PublicNext
01/01/2021 07:29 pm